Sunday, November 14, 2021

ಇಂದು ನನ್ನ ಹುಟ್ಟಿದ ಹಬ್ಬ

 ಇಂದು ನನ್ನ ಹುಟ್ಟಿದ ಹಬ್ಬ



ಇಂಗ್ಲಿಷ್ ಕ್ಯಾಲೆಂಡರಿನ ಪ್ರಕಾರ ನನ್ನ ಜನ್ಮದಿನ. ಮುಖಪುಟಕ್ಕೆ ಬರುವುದಕ್ಕಿಂತ ಮುಂಚೆ ನನಗೂ ಒಂದು ಜನ್ಮ ದಿನವಿದೆ ಎಂಬುದೇ ಅರಿವಿರಲಿಲ್ಲ. ಎಂದೂ ಅದನು ಆಚರಿಸಿದನು ನಾನಲ್ಲ. ಆದರೆ ಇಂದು ಎಷ್ಟೋ ಜನ ಸ್ನೇಹಿತರು ಮುಖಪುಟದಲ್ಲಿ ನನಗೆ ಶುಭಾಶಯಗಳ ಸುರಿಮಳೆ ಗರೆದು ಅಭಿನಂದಿಸುತಿದ್ದಾರೆ. ಕೆಲ ಆತ್ಮೀಯರು ಜನ್ಮದಿನದ ಶುಭ ನುಡಿಗಳೊಂದಿಗೆ ನನ್ನ ಭಾವಚಿತ್ರಗಳನ್ನು ವಾಟ್ಸಪ್ ಅಂತಸ್ತಿಗೆ ಹಾಕಿ, ಶುಭ ಕೋರುತ್ತಿದ್ದಾರೆ. ಇದೆಲ್ಲ ನೋಡಿದರೆ, ಏನೋ ಒಂಥರಾ ಖುಷಿ, ಏನೋ ಒಂಥರಾ ಸಂತೋಷ ಮುಜುಗರ ಮನಸ್ಸಿಗೆ.

ಎಷ್ಟೊ.. ಸಲ ಅವ್ವನ ಬಳಿ ಹೋಗಿ ನಾನು ಹುಟ್ಟಿದ ದಿನದ ಬಗ್ಗೆ ಕೇಳಿದ್ದೆ. ಅದಕ್ಕವಳು "ಇಗಿನಾವರಂಗ ಶ್ಯಾಣತನ ಆವಾಗೆಲ್ಲಿ ನಮ್ಮಲ್ಲಿ ಇತ್ತಪ್ಪ, ಇಗ್ನವ್ರು ಬಡ್ಡ್ಯೆ ಅದು ಇದು ಅಂತ ಬರ್ದಿಟ್ಕೊಂಡು ಮಾಡ್ತಾರ. ಅಗ ಕಣ್ಣಿದ್ದು ಕುರ್ಡರು ನಾವು. ಇಗಿನವರಾದರ ಸಾಲಿ ಕಲ್ತಾರ, ಮಕ್ಳ ಹುಟ್ಟಾನ ದಿನಾ, ಟಾಯಮ್ಮ ಹಾಳ್ಯಾಗ ಬರ್ದಿಡ್ತಾರ. ಇದೆಲ್ಲ ಆಗ ನಮಗೆಲ್ಲಿ ಗೊತ್ತಿತ್ತಪ್ಪ. ನಮ್ ತವ್ರಮನಿಯವರು ಕುಬಸಾ ಮಾಡಾಕ ಬಂದಿದ್ದರು ಅವತ್ತೆ ನಾನು ಬ್ಯಾನಿ ತಿಂದು ಸರಕಾರ ದವಾಖಾನ್ಯಾಗ ನಿನ್ನ ಹಡದಿನಿ. ಅವತ್ತ ಅವ್ರ ಅತ್ತಿ ಮಗ್ಳ ಸಣ್ಣ್ ಹುಡ್ಗಿಗಿ ಜೊತಿ ಕುಂಡ್ರಸಿ ಕುಬಸಾ ನಿಮಪ್ಪಗ ಮಾಡ್ಯಾರ. ಅಂದ್ಳು, ಅವ್ಳ ಆ ಮುಗ್ದತೆ ಕಂಡು ನಗು ಕುಳಿತೆ. ಮತ್ತೆ ಮುಂದುವರೆದು ಹೇಳಿದಳು ಅವ್ವ.

 "ಮಗ ದೀವಳ್ಗಿ ಅಮಾಸಿ ಆಸ ಪಾಸನ್ಯಾಗ ಹುಟ್ಟಿದಿ, ನೀ ಹುಟ್ಟದಾಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟಿದ್ದ ಅವ್ರೆನರ ಬರ್ದಿಟ್ಟಿರ ಬೇಕು. ಅಂದ್ಳು ನಮ್ಮವ್ವ. ಅಮಾವಾಸ್ಯೆ ಮತ್ತು ಹುಣ್ಣಿಮೆ ಲೆಕ್ಕ ಹಾಕಿ ದಿನಗಳಿಯೊ ಕಾಲದಾಗ ಅವ್ರರೆ ಎಲ್ಲಿಂದ ಬರ್ದಿಟ್ಟಾರು ನನ್ನ ಜನ್ಮ ದಿನವನ್ನ. ಎಂದು ಸುಮ್ಮನಾದೆ.

ನಮ್ಮ ಅಜ್ಜ ನನ್ನ ಕರಕೊಂಡು ಶಾಲೆಗೆ ದಾಖಲಿಸಲು ಹೊದಾಗ, ಹೆಡ್ ಮಾಸ್ತರು ಕರ್ದು, ಬೆನ್ನ ಹಿಂದಿಂದ ನನ್ನ ಕೈ ಕಿವಿಗೆ ತಾಗಿಸಲು ಹೇಳಿದರು. ಅವರು ಹೇಳಿದಂತೆ ನಾನು ನನ್ನ ಕೈಯನ್ನು ಬೆನ್ನ ಹಿಂದಿಂದ ಕಷ್ಟ ಪಟ್ಪು ತಂದು ಹಚ್ಚಿದ್ಯಾ. ಅಗ ಅವರು ನನ್ನ ಶಾಲೆಗೆ ದಾಖಲಿಸಿಕೊಂಡಿದ್ದರು. ಅವರೇ ನಾನಗೊಂದು ಜನ್ಮ ದಿನವನ್ನು ನೀಡಿದರು. ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ನಮೂದಾಯಿತು. ಅದೇ ನನ್ನ ಜನ್ಮ ದಿನವಾಗಿ ಆಚರಣೆಯು ನಡೆಯಿತು...


School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...