Wednesday, December 13, 2023

ಬರದ ಬರೆ

 


ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬತ್ತದ ಕಟಾವು ಜೋರಾಗಿಯೇ ನಡೆದಿತ್ತು. 

ಅಲ್ಪ ಸ್ವಲ್ಪ  ಕಾಲುವೆ ನೀರಾವರಿ ಆಶ್ರಿತ ಹತ್ತಿ ಗಿಡಗಳು ಕೆಲವೆಡೆ ಒಡೆದು ನಿಂತು, ಬೆಳ್ಳಿ ಮೋಡದಂತೆ ಅರಳಿ ಕಂಗೊಳಿಸುತಿದ್ದರು ಅವುಗಳಿಗೆ ಈ ವರ್ಷದ ಮಾರ್ಕೆಟ್ ನಲ್ಲಿ ಬೆಲೆಯಿಲ್ಲ. ತೊಗರಿ ಬೆಳೆಗೆ ಮಾರ್ಕೆಟ್ ನಲ್ಲಿ ಬೆಲೆಯಿದ್ದರೂ ಜೂಮ್ ಹಾಕಿ ನೋಡಿದರು ಈ ವರ್ಷ ಕಾಯಿ ಬಿಟ್ಟಿಲ್ಲ. ಒಣ ಬೇಸಾಯದ ಮಳೆ ಅವಲಂಬಿತ ಕೆಲವು ಬೆಳೆಗಳು ಮಳೆ ಇರದೆ,  ನೆಲದಿಂದ ಮೇಲೆಳಲಾಗದೆ ರೋಗ ಹತ್ತಿ, ಕುರುಚಲು ಒಡೆದು, ಬಾಯಾರಿ ಒಣಗಿ ನಿಂತಿವೆ. 

ಯಾದಗಿರಿ ಜಿಲ್ಲೆಯ ಗಡಿ ದಾಟಿ, ವಿಜಯಪುರ ಜಿಲ್ಲಾ ಗಡಿಯೊಳಗೆ ಕಾಲಿಡುತ್ತಿದ್ದಂತೆಯೆ ನೆಟೆಯೊಡೆದು ನಿಂತ ಹೊಲಗದ್ದೆಗಳು ಇನ್ನೂ ಹೆಚ್ಚಾಗಿಯೇ ಕಾಣುತ್ತಿದ್ದವು. 

ವಿಜಯಪುರ ಜಿಲ್ಲೆಯಲ್ಲಿ ಹೆಸರಿಗೆ ಪಂಚ ನದಿಗಳು ಹರಿದರು ಅದರ ಸವಲತ್ತು ರೈತರಿಗೆ ದೊರಕದು. 500, 700 ಅಡಿಗಳಷ್ಟು ಬೋರ್ವೆಲ್ ಕೊರೆದರು ನೀರು ಬೀಳದೆ ಅತಿ ಹೆಚ್ಚು ರೈತರು ಒಣ ಬೇಸಾಯವೆ ಅವಲಂಬಿಸಿದ್ದಾರೆ. ಮಳೆಯ ಮೇಲೆಯೇ ನಂಬಿಕೆಯಿಟ್ಟು ಬದುಕು ಸಾಗಿಸುತ್ತಾರೆ. ಬರಗಾಲ ಬಿದ್ದರೆ ಅಲ್ಲಿ ಇಲ್ಲಿ ಸಾಲ ಮಾಡಿ, ಮಹಾರಾಷ್ಟ್ರಕ್ಕೆ ಗುಳೆ ಹೋಗುವ ರೈತರ ಪರಿಸ್ಥಿತಿ ಕಂಡು ಮನಸ್ಸಿಗೆ ಸ್ವಲ್ಪ ಕಸಿವಿಸಿ ಆಯಿತು. 

ಈ ವರ್ಷ ಬರದಿದ್ದರೆ ಏನಾಯ್ತು. ಮುಂದಿನ ವರ್ಷ ಬಂದಿತು. ಭೂತಾಯಿ ಮನಸು ಮಾಡಿದರೆ ಒಂದೇ ವರ್ಷದಲ್ಲಿ ನಮ್ಮ ಸಾಲ ತೀರಿತು. ಎಂಬ ಆಶಾಭಾವನೆಯೊಂದಿಗೆ ಬದುಕು ಸಾಗಿಸುವ ನಮ್ಮ ಮುಗ್ದ ಮನಸ್ಸಿನ ರೈತರಿಗೆ, ನಾನು ನನ್ನ ಮನಸಲ್ಲಿಯೇ ಸೆಲ್ಯೂಟ್ ಮಾಡುತ್ತಾ ಸುಮ್ಮನಾದೆ.


ಒಬ್ಬ ರೈತನ ಮಗನಾದರಿಂದ ಅವರು ಪಡುವ ಕಷ್ಟ, ಯಾತನೆ, ಬಹಳ ಹತ್ತಿರದಿಂದ ಕಂಡು ಅನುಭವಿಸಿದವನು ನಾನು. ಹೆಸರಿಗೆ ರೈತ ದೇಶದ ಬೆನ್ನೆಲುಬು. ಅವನ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ಅವನ ಹೆಸರಲ್ಲಿ ರಾಜಕಾರಣ ಮಾಡುವ ರಾಜಕಾರಣಿಗಳಿಗು ಕಿಂಚಿತ್ತು ಚಿಂತೆ ಇಲ್ಲ. ಅವನು ಬೆಳೆದ ಬೆಳೆಗೆ ಮಾರ್ಕೆಟ್ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದು ರೈತರ ಪರಿಸ್ಥಿತಿ. ಎಷ್ಟೋ ಸಲ ರೈತ ನಡು ರಸ್ತೆಯಲ್ಲೆ ತಾನು ಬೆಳೆದ ಬೆಳೆ ಸುರಿದು ಬರಿಗೈಲೆ ಮನೆಗೆ ಹೋದ ಘಟನೆಗಳು ಇವೆ. ಸರಕಾರಗಳು ಈ ಕಡೆ ಗಮನಹರಿಸಬೇಕಿದೆ, ಅವನ ಜೀವನಕ್ಕು ಭದ್ರತೆ ನೀಡಬೇಕಿದೆ. ಎಂದು ಹೀಗೆ ಏನೇನೋ ಯೋಚಿಸುತ್ತಾ ಹೋಗುವಷ್ಟರಲ್ಲಿ ಊರು ಬಂದೇಬಿಡ್ತು. 

ಮರುದಿನ ಸ್ನೇಹಿತರೊಬ್ಬರ ಬೈಕ್ ಹತ್ತಿ ಹೊಲಕ್ಕೆ ಬಂದೇ. ಬರುವಷ್ಟರಲ್ಲಿ ನಮ್ಮ ತಂದೆಯವರು ಹತ್ತಿ ಗಿಡದಲ್ಲಿ ಅಲ್ಪಸ್ವಲ್ಪ ಕಾಯಿಗಳಿದ್ದರೂ ಅವುಗಳನ್ನು ಬುಡ ಸಮೇತ ಕಿತ್ತೆಸೆಯುತ್ತಿದ್ದರು. ಹೊಲಕ್ಕೆ ಹೋದವನೇ ಸ್ವಲ್ಪ ಯೋಗ ಕ್ಷೇಮ ವಿಚಾರಿಸಿ,  ಗಿಡಗಳನ್ನು ಏಕೆ ಕೆತ್ತುತ್ತಿದ್ದೀರಿ ಇನ್ನು ಕಾಯಿಗಳಿಗೆ ಇವೆ, ಇನ್ನೊಂದು ಬೀಡು ಬಿಡಿಸಿಕೊಳ್ಳಬಹುದಲ್ಲ ಎಂದೆ. 

ಅದಕೆ ನಮ್ಮ ತಂದೆಯವರು ಮರುತ್ತರವಾಗಿ ಮಾರ್ಕೆಟ್ ಹತ್ತಿಗೆ ಬೆಲೆ ಇಲ್ಲ. ಹತ್ತಿ ಬಿಡಿಸಿದವರ ಕುಳಿನು ಹೊಂಡಲ್ಲ. ಹೋಲ ಮಾಡಿದವರಿಗೆ ಈ ವರ್ಷ ಕೈಲಿಂದ ಕೊಡಬೇಕು. ಏನು ಮಾಡೋದು ಬಂದಷ್ಟು ಬರಲಿ ಅಂತ ಹತ್ತಿ ಕಿತ್ತಿ ಗೋದಿ ಹಾಕೋಣ ಅಂತ  ವಿಚಾರ ಮಾಡಿದ್ದೇನೆ ಅಂದರು. 


ಒಕ್ಕುಲುತನದಲ್ಲಿ ಅವರಿಗಿರುವ ಅನುಭವ ಮುಂದೆ ನಾವೆಲ್ಲಿ,  ಮನಸಲ್ಲಿಯೇ ತಿಳಿದು ಸುಮ್ಮನಾಗಿ, ಅಲ್ಲಲ್ಲಿ ಒಡ್ಡಿಗೆ ಬೆಳೆದ ಕೆಲ ತರಕಾರಿ ಹರಿದು ಬಾಯಿ ತಿನ್ನುತ್ತಾ. ಒಣ ಬೇಸಾಯದ ಸ್ವಂತ ಹೊಲದ ಸ್ಥಿತಿ ಹೀಗಿರಬಹುದು ಅಂತ ತಿಳಿದು ಆಕಡೆ ಸ್ನೇಹಿತನೊಂದಿಗೆ ಹೆಜ್ಜೆ ಹಾಕಿದೆ. 

ಅಕ್ಕ ಪಕ್ಕದ ಮಳೆ ಆಶ್ರಿತ ಹೊಲ ಗದ್ದೆಗಳಲ್ಲಿ ಒಂದೆರಡು ಮಳೆಗೆ ಮೊದಲಿಗೆ ಚೆನ್ನಾಗಿಯೇ ಬೆಳೆದಿದ್ದ ಬೆಳೆಗಳು, ಈಗ  ಬೀಸುವ ಒಣ ಮಸುಂಟಗಿ ಗಾಳಿಗೆ ಹಿಡಿದ ಫಲವೆಲ್ಲ ಉದುರಿ ನಿಂತಿದ್ದವು,  ಊಬು 

ಕಡ್ದ ಬೆಳೆದು ದನಕರಿಗೂ ದನ ಕರಗಳಿಗೂ ತಿನ್ನಲು ಬರದಂತಾಗಿದ್ದವು. ಹೊಲಗದ್ದೆಗಳಲ್ಲಿ ಹಾಯ್ದು ಹೋಗುವಾಗ, ಊಬು ಕಡ್ಡಿಗಳು ಬೂಟು ಪ್ಯಾಂಟಿನ ತುದಿಗೆ ಚುಚ್ಚಿ ಮನಸ್ಸಿಗೆ ಇನ್ನಷ್ಟು ಗಾಯಗಳು ಮಾಡಿದವು.


ಅಲ್ಲೇ ಪಕ್ಕದಲ್ಲಿ ಇದ್ದ ನಮ್ಮ ಹೊಲದಲ್ಲಿ ಹೋಗಿ ಬೂಟು ಪ್ಯಾಂಟಿಗೆ ಮೆತ್ತಿದ್ದ ಯೂಬು ಕಡ್ಡಿಗಳನ್ನು ತೆಗೆಯುತ್ತಾ, ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟೆ. ಒಂದೆರಡು ನೀರು ಹಾಯಿಸಿದ ತೊಗರಿ ಹೊಲ ಅಷ್ಟೇನೂ ಅಲ್ಲದಿದ್ದರೂ ಅಲ್ಲಲ್ಲಿ ಸ್ವಲ್ಪ ಹೂ ಬಿಟ್ಟು ಕಾಯಿ ಹಿಡಿದು ನಿಂತಿತ್ತು. ಅಕ್ಕ ಪಕ್ಕದ ಹೊಲಗಳಿಗೆ ಹೋಲಿಸಿದರೆ ಇದು ಸ್ವಲ್ಪ ಪರವಾಗಿಲ್ಲ ಅನಿಸಿತು.. ಹೀಗೆ ಅಲ್ಲೇ ಸ್ವಲ್ಪ ಸಮಯ ಕಳೆದು ಮನೆ ಕಡೆಗೆ ದಾರಿ ಹಿಡಿದೇವು..


ಬಸವರಾಜ ಭೂತಿ, ಶಿಕ್ಷಕರು

ಸಿಂದಗಿ

  


Wednesday, November 15, 2023

ಇಂದು ನನ್ನ ಜನ್ಮ ದಿನ..

ಇಂದು ನನ್ನ ಜನ್ಮ ದಿನ.. 

ಹರಸಿದ  ಮನಗಳಿಗೆ ಕೋಟಿ ನಮನ. 

ಹಾಗೆ, ಓದಿ ತಿಳಿಸಿ ಈ ನನ್ನ ಲೇಖನ🙏🙏

ಮುಖಪುಟಕ್ಕೆ (ಪೇಸ್ಬುಕ್) ಬರುವುದಕ್ಕಿಂತ ಮುಂಚೆ ನನ್ನ ಜನ್ಮದಿನಾಚರಣೆ ಆಚರಣೆಯಲ್ಲಿ ಇರಲಿಲ್ಲ, ಅದು ಶಾಲಾ ಹೆಡ್ ಮಾಸ್ಟರ್ ಕೃಪಾ ಕಟಾಕ್ಷದಿಂದ ಶಾಲೆಯಲ್ಲಿ ದಾಖಲಾಗಿ, ಅದು ಕೆವಲ ಶಾಲಾ ಪ್ರಮಾಣ ಪತ್ರಗಳಲ್ಲಿ ಮಾತ್ರ ಸೀಮಿತವಾಗಿತ್ತು. 

ಏಕೆಂದರೆ ಎಲ್ಲರಿಗೂ ಜನ್ಮದಿನದ ಜ್ಞಾಪನ ಕಳಿಸಿ, ಜನ್ನ ದಿನಕ್ಕೆ ಶುಭಾಶಯಗಳು ತಿಳಿಸಲು ಅನುವು ಮಾಡಿಕೊಡುವುದೆ ಫೇಸ್ಬುಕ್ ಅಲ್ಲವೆ.. ಅದಕ್ಕೆ ನನ್ನ ಜನ್ಮದಿನದ ರಹಸ್ಯ ಕುರಿತು ಸ್ವಲ್ಪ ಬರೆಯೋಣ ಅಂತ.

 ಹಾಗೇ, ಸುಮ್ಮನೆ ಒಂದು ದಿನ  ನನ್ನವ್ವನ ಹತ್ತಿರ  ಕುಳಿತು ಜನ್ಮದಿನದ ರಹಸ್ಯ ಕೆದಕ ತೊಡಗಿದೆ. 

. "ಯವ್ವ ನಾ ಯಾವಾಗ ಹುಟ್ಟಿನಿ ಅಂತ ನಿನಗೆನರ ಗೊತ್ತಾದೇನು... ಎಲ್ಲರೆ ಚಿಟ್ಯಾಗ,,, ಗಿಟ್ಯಾಗ,,, ಬರದಿಟ್ಟಿರೇನು.. ಅಂದೆ" ... 

ಅದಕ್ಕವಳು... 

"ಇವಾಗಿನವರಂಗ ನಾವೆಲ್ಲಿ ಸ್ಯಾಣ್ಯಾರು, ಸಾಲಿ ಕಲತಿದ್ದರ ಬರದಿಡುತಿದ್ವಿಯೇನೊ.. ಅಂದವಳೇ ಎಲ್ಲವೂ ಹೇಳೋದಕ್ಕೆ ಪ್ರಾರಂಭಿಸಿದಳು. 

ಆಗ ಹೆಣ್ಣು ಮಕ್ಕಳಿಗಿ ಸಾಲಿ ಹಿಂದ ಸಹ ಹಾಯ್ಲಾಕ ಸ್ವಾತಂತ್ರ್ಯ ಇರಲಿಲ್ಲ ಎಲ್ಲಿಂದ ಸಾಲಿ ಕಲಿಯೋದು.. 

ನಮ್ ಅಪ್ಪಗ ನಾವು ಹದಿನಾಲ್ಕು ಮಂದಿ ಮಕ್ಕಳು. ಆಗಿನ ಕಾಲದಾಗ ಹೊಟ್ಟಿ ತುಂಬಿಸಿಕೊಳ್ಳೋದೆ ದೊಡ್ಡ ಕಷ್ಟ ಆಗಿತ್ತು. ಹೆಣ್ಣ ಮಕ್ಕಳ ಸಾಲಿ ಕಲಿತಿನಿ ಅಂದ್ರ ಆವಗಿನವರು ಮೂಗ್ ಮುರಿತಿದ್ರು ಅಂದ್ಳು.... 

ಇಗಿನ ಹೆಂಗಸರು  ಸಾಲಿ ಕಲಿತ ಬಾಳ ಸ್ಯಾಣ್ಯಾ ಇರತಾರ...  ಮಕ್ಳ ಹುಟ್ಟಾನ ದಿನ, ತಿಥಿ, ನಕ್ಷತ್ರ ಅಂತ ಎಲ್ಲವು ಬರ್ದಿದಿಡತಾರ.  ತಿಂಗಳಿಗಿ, ವರ್ಷಕ್ಕೊಮ್ಮಿ ಬಡ್ಡ್ಯಾ, ಗಿಡ್ಡ್ಯಾ ಅಂತ ಎನೇನೊ ಆಚರಣಿ ಮಾಡ್ತಾರ...  ನಾವೆಲ್ಲಿಂದ ಬರ್ದಿಡಮ್ಮ ಅದು ನಮಗೆ ಗೊತ್ತೇ ಇರಲಿಲ್ಲ ಅಂದ್ಳು,.. 

ನೀವ್ ಬರ್ದಿಟ್ಟಿದ್ದರ ಚೊಲೊ ಇರ್ತಿತ ನೋಡು, ಮಂದಿಯಂಗ ನಾನು  ಹುಟ್ಟಿದಬ್ಬ, ಗಿಟದಬ್ಬ  ಜೋರಗೆ ಮಾಡಕೊಳ್ಳಬಹುದಿತ್ತು ಎಂದು ತಮಾಸೆ ಮಾಡ್ದೆ... 

"ಕಣ್ಣಿದ್ದು ಕುರ್ಡರಪ್ಪ ನಾವು.   ಆಗ ಇವೆಲ್ಲ ಪರದೇಶಿ ಆಚರಣಿ ನಮಗೆಲ್ಲಿ ಗೊತ್ತದ್ವು..... ಅಮಾಸಿ, ಹುಣ್ಣಿಮಿ ನೋಡಿ ಹುಟ್ಟಿದ ದಿನ ಹೇಳುತ್ತಿದ್ದಿವಿ....  ಬಾಳಂದ್ರ ಹುಟ್ಟಿದ ಅಮಾಸಿ ದಿನ,  ತೆಲಿ ಎರ್ದು ಗುಡಿಗಿ ಕಳಿಸ್ತಿದ್ವಿ, ಅಂದ್ಳು" 

 " ಮಗ ನಿನಗ ಹಡಿಯುವ ದಿವಸ ಮುಂಚ್ಯಾ ಚಂತಾನ ಭಾವಿ ಹೊತ್ತ ಸಂಜಿಕ ಬ್ಯಾನಿ ತಿಂದು ಹಡದಿನಿ.. ಅವತ್ತ ನಮ್ಮ ತವರು ಮನೆಯವರು ಕುಭಸ ಮಾಡಾಕ ಬಂಡಿ ಹುಡ್ಕೋಂಡು ಊರಿಗಿ ಬಂದಿದ್ರು..  ಅವತ್ತೆ ನನಗ ಬ್ಯಾನಿ ಶುರುವಾಗಿದ್ವು... ನಿಮ್ ಮುತ್ಯಾ  ಸರ್ಕಾರಿ ದವಾಖಾನಿಗಿ ಕರ್ಕೊಂಡು ಹೋಗಿ ಅಲ್ಲೆ ಬಾಣೆತನನು ಮಾಡ್ಸುದರು. 

ಮತ್ ಕುಬ್ಸಾ ಹ್ಯಾಂಗ್ ಮಾಡಿದ್ರಿ ಬೇ,. ಎಂದು  ಕುತೂಹಲದಿಂದ ಕೇಳಿದೆ.

 "ಬಂದ ಮಂದಿ ಹಂಗ್ಯಾ ಹೊಗ್ಬಾರದಂತ ನಿಮ್ ಮುತ್ಯಾ ಅವತ್ತ  ಎನು ತಿಳಿಲಾರ್ದ ಸಣ್ಣ್  ಆಡೊ ಹುಡ್ಗಿಗಿ, ಯಮಮವ್ವ ಅನ್ನಾಕಿ  ಅವ್ರ ಅತ್ತಿ ಮಗ್ಳಿಗಿ  ನಿಮ್ಮಪ್ಪನ ಜೊತಿ ಕುಂಡ್ರಸಿ ಕುಬಸಾ ಮಾಡಿದರು". ಎಂದು ನಗುಮುಖದಿಂದ ಹೇಳಿದಳು, ಅವ್ಳ ಆ ಮುಗ್ದತೆ ಕಂಡು ನಗು  ಬಂತು. ಹೌದೇನು ಮುಂದೇನಾಯ್ತು. ಎಂದೆ. 

"ಚೊಛ್ಛಲ ಮಗ ನೀಯೊಬ್ಬ, ಮತ್ತ ಏಳರಾಗ ಹುಟ್ಟಿದ ನಿಮ್ ತಮ್ಮನೊಬ್ಬ  ಇಬ್ಬರೇ ನನಗ ಜಾಸ್ತಿ ತ್ರಾಸ್ ಕೊಡದೆ ಹುಟ್ಟದವರು... 

ಒಟ್ಟ್ ಒಂಬತ್ತ್ ಮಕ್ಳ ಹಡ್ದಿನಿ ನಾ, ಆದ್ರಗ ನಿಮ್ಮಿಬ್ಬರಿಗಿ ಬಿಟ್ರ ಒಂದು ಬದುಕಿಲ್ಲ. ಅವೆಲ್ಲ ಆರರಾಗ, ಎಂಟ್ರಾಗ ಹುಟ್ಟಿ ವಾತೊಂಬತ್ತು ದಿನ ಬದಕಿ ಸತ್ತ ಹೊಗತಿದ್ವು. ಕೆಲವು ಹೊಟ್ಟ್ಯಾಗ ಸತ್ತು ತರಾಸ ಮಾಡ್ತಿದ್ವು ಎಂದ್ಳು ದುಃಖ ದಿಂದ.....

ಈಗಿನಂಗ ಆವಾಗ ದವಾಖಾನಿ ಮುಂದಿರ್ಲಿಲ್ಲ.ದವಾಖಾನ್ಯಾಗ ಸಿಕ್ಕಂಗ ಹೊಟ್ಟಿ ಹಿಚಕ್ಯಾಡಿ ಅವು ತಗಿತಿದ್ರು. ಸತ್ ಹುಟ್ದಂಗ ಅಗತಿತ್ತು ಎಂದಾಗ.. ನಿಷ್ಕಲ್ಮಶವಿರದ ಮುಗ್ದ ಮನಸ್ಸಿನ ಮಾತು ಕೇಳಿ ಕಳ್ ಚುರ ಅಂದಂಗಾಗಿ, ಕಣ್ಣಲ್ಲಿ ನೀರ ಜಿನುಗಿತ್ತು.... 

ಕಣ್ ವರಸ್ಕೋತ, ಅ ದೇವರ ನಿನಗ ಬಾಳ ಅನ್ಯಾಯ ಮಾಡ್ಯಾನವ್ವ ಎಂದೆ.

ಮತ್ತೆ ಮುಗುಳ್ನಗು ತಂದು "ಇರಲಿ ಬಿಡು ಬೆ... ಇಗಿನವರು ಅಗಿದ್ದರ ಸತ್ತೆ ಹೊಗಿರ್ತಿದ್ರು. ಹಿಂದಕಿನ್ ಮಂದಿದು ಗಟ್ಟಿ ಜೀವ್, ಮೊದಲೆ ಜವಾರಿ ಮಂದಿ ಅಂತ ಅದ್ಕೆ ಬದುಕಿರಿ".. ಅಂತ ನಕ್ಕೋತ ಹೇಳಿದೆ.

 "ಮಗ ನೀ ಹುಟ್ಟಿದಾಗ, ದೀವಳ್ಗಿ ಅಮಾಸಿ ಇತ್ತು. ಆಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟಿದ್ದ.. ಅವರೇನರೆ ಬರ್ದಿಟ್ಟಿರ ಬೇಕು, ಅವರ್ನ ಕೆಳಿದರ ಗೊತ್ತಾಗತಾದ" ಅಂದ್ಳು.... 

ಇರ್ಲಿ ಬಿಡು ನಮ್ಮ ಸಾಲಿ ಮಾಸ್ತಾರು ಎಲ್ಲಾ ಸಾಲ್ಯಾಗ  ಬರ್ದಿಟ್ಟಾರ. ಅವತ್ತೇ ಎಲ್ಲರೂ ನನಗ ಶುಭಾಶಯ ಹಾರೈಸತಾರ ನೀ ಚಿಂತಿಮಾಡ್ಬೇಡ.... ಎಂದು ನಗುತ್ತಾ ಸುಮ್ಮನಾದೆ.

ಅಮಾವಾಸಿ, ಹುಣ್ಣಿಮಿ ಲೆಕ್ಕ ಹಾಕಿ ದಿನಗಳ ಅಳೆಯೊ ಕಾಲದಾಗ. ಸಾಲಿ ಕಲಿದವರು ಅವರಾದ್ರು ಹೆಂಗ್ ಬರ್ದಿಟ್ಟಾರು. 

ನಮ್ಮದು ಕೂಡು ಕುಟುಂಬ. ಮಕ್ಕಳು ಸೇರಿ ಸುಮಾರು ಇಪ್ಪತ್ತು ಇಪ್ಪತೈದು ಜನ ಸದಸ್ಯರು ನಮ್ಮ ಮನ್ಯಾಗ. ಒಟ್ಟು ಹತ್ತು ಜನ ಮಕ್ಕಳಲ್ಲಿ ನಮ್ಮಪ್ಪನೆ ಮನಿಗಿ ಹಿರ್ಯಾವ. ಹಿಂಗಾಗಿ ಮನಿ ಜವಾಬ್ದಾರಿ  ನಮ್ಮಪ್ಪನ ಹೆಗಲಮ್ಯಾಲಿತ್ತು. 

ಆಗ ಊರಾಗ ಕೆಲಸ ಬ್ಯಾರೆ ಕಮ್ಮಿ ಇರುತ್ತಿದ್ವು. ಹೀಗಾಗಿ ನಮ್ಮವ್ವಗ ಕರ್ಕೋಂಡು ಮಹಾರಾಷ್ಟ್ರಕ್ಕೆ ದುಡ್ಡ್ಲಿಕೆ ಹೋಗುತ್ತಿದ್ದ.  ನಮ್ ಮುತ್ಯಾ.. ನನಗ, ಮನ್ಯಾಗ ಮಕ್ಕಳ ಜೊತಿ ಅಡಕೋತ ಸಾಲಿ ಕಲಕೋತ ಇರಲಿ ಅಂತ ನನ್ನ ಅವರ ಜೊತಿ ಕಳ್ಸತಿರಲಿಲ್ಲ. ಹೀಗಾಗಿ ನಮ್ಮ ಅಪ್ಪ ಅವ್ವನ ಜೊತೆ ಇರುವುದಕ್ಕಿಂತ ಅತ್ತೆ, ಮತ್ತು ಚಿಕ್ಕಪ್ಪಂದಿರ ಜೊತೆ ಬೆಳೆದಿದ್ದು ಹೆಚ್ಚು.

 ಕೈ ತಿರಗಿಸಿ, ಜೊಗ್ಗಿ ಹಚ್ಚಿದದ್ರು ಕಿವಿಗೆ ಬಾರದ ವಯಸ್ಸಿನ್ಯಾಗ ನಮ್ಮ  ಚಿಕ್ಕಪ್ಪ(ಕಾಕಾ)ರ ಜೊತಿ ನನಗೂ ಶಾಲೆಗೆ ಹೆಸರ ಹಚ್ಚದಾ ನಮ್ ಮುತ್ಯಾ..  ಹೆಡ್ ಮಾಸ್ಟರ್ ಜನ್ಮ ದಿನಾಂಕ ಕೇಳಿದಾಗ ದೀಪಾವಳಿ ಸುತ್ತಾ ಮುತ್ತಾ ಹುಟ್ಯಾನ್ರೀ.. ಎಂದು ಹೇಳಿರ ಬೇಕು.. ಅದಕ ನನ್ನ ಜನ್ಮ ದಿನಾಂಕ ನವಂಬರ್ ತಿಂಗಳಲ್ಲಿ ಬಂದಿರಬಹುದು. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಹೆಡ್ ಮಾಸ್ಟರ್ಗಳು ಜೂನ್ ತಿಂಗಳಲ್ಲಿ ಹೆಚ್ಚು ಹೆಸರುಗಳು ನಮೂದಿಸಿರುವದೆ ಜಾಸ್ತಿ. 

ನಮ್ ಮುತ್ಯಾ.. ದೀಪಾವಳಿ ಸುತ್ತಾ ಮುತ್ತ ಅಂದಿದ್ದಕ ಇರಬಹುದೇನೊ. ದೀಪಾವಳಿ ಅಮಾವಾಸ್ಯೆ ಬರುವುದು ಸಾಮಾನ್ಯವಾಗಿ ನವಂಬರ್ ತಿಂಗಳಲ್ಲಿ. ಇದ್ನ ಲೆಕ್ಕಾ ಹಾಕಿ ಹೆಡ್ ಮಾಸ್ಟರ್ಗಳು ನವಂಬರ್ 15 ಎಂದು ದಾಖಲು ಮಾಡಿರಬೇಕು ಅನಿದುತ್ತದೆ.

ಅದೇನೇ ಇರಲಿ, ನನಗೆ ಜನ್ಮ ನೀಡಿದ್ದು ನನ್ನ ತಂದೆ ತಾಯಿಯಾದರೆ. ಹುಟ್ಟಿದಬ್ಬ ಆಚರಿಸಿಕೊಳ್ಳಲು ಒಂದು ಪ್ರಮಾಣ ಪತ್ರದಲ್ಲಿ ಜನ್ಮದಿನವನ್ನು ನೀಡಿದ್ದು ನಮ್ಮ ಹೆಡ್ ಮಾಸ್ಟ್ರುಗಳೇ...

ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ದಾಖಲಾಗಿ. ಅದೇ ನನ್ನ ಜನ್ಮ ದಿನವಾಗಿ ಇಂದಿನವರೆಗೂ ಆಚರಣೆ ನಡೆಯುತ್ತಲೇ ಇದೆ... ನನ್ನ ಪ್ರೀತಿಯ ಮಡದಿಯು ಕೂಡ ಪ್ರತಿ ವರ್ಷ ಇದೇ ದಿನ ನನ್ನ ಹುಟ್ದಬ್ಬಕ್ಕೆಂದು ಹಣ ಕೂಡಿಟ್ಡು, ಹೊಸ ಬಟ್ಟೆಯೊಂದಿಗೆ ಮತ್ತೇನರೆ ಉಡುಗೊರೆಯು ಸಹ ಕೊಡಿಸತ್ತಾಳೆ. ನನ್ನ ಮಕ್ಕಳು ಸಿಹಿ ತಿನಿಸಿ ಶುಭಾಶಯಗಳು ಕೋರಿದಾಗ ಬಾಳು ಸಾರ್ಥಕ ಎನಿಸುತ್ತದೆ. 

ಪ್ರತಿ ವರ್ಷವೂ ಮುಖಪುಟ (ಫೇಸ್ಬುಕ್) ಎಲ್ಲರಿಗೂ ಜ್ಞಾಪಿಸುತಿದ್ದಂತೆ.  ಸ್ನೇಹಿತರು ಬಂಧು ಬಾಂಧವರು ಶುಭಾಶಯಗಳ ಸುರಿ ಮಳೆಗಳೇ ಸುರಿಸಿ, ಫೇಸ್ಬುಕ್ ವಾಟ್ಸಪ್ ತುಂಬಿ ಬಿಡುತ್ತಾರೆ. 

ಎಷ್ಟೋ..! ಜನ ಆತ್ಮೀಯರು, ನನ್ನ ಮುದ್ದು ವಿದ್ಯಾರ್ಥಿನಿಯರು ನನ್ನ ಭಾವಚಿತ್ರವನ್ನು ತಮ್ಮ ವಾಟ್ಸಪ್ ಅಂತಸ್ತಿಗೆ ಇಟ್ಟುಕೊಂಡು ಅಭಿಮಾನತೋರಿ ಅಭಿನಂದಿಸುತ್ತಾರೆ. ಸ್ನೇಹಿತರು ಪಾರ್ಟಿ ಬೇಡಿ ಚುಡಾಯಿಸುತ್ತಾರೆ. ಇದೆಲ್ಲ ನೋಡಿದಾಗ ಖುಷಿಯಿಂದ ಮನದುಂಬಿ ಅಭಿನಂದಿಸಿದವರಿಗೆ ಪುನಃ ಧನ್ಯವಾದಗಳು ಕೂಡ ತಿಳಿಸಲು ಮುಂದಾಗುತ್ತೇನೆ.

ನನ್ನ ಜನ್ಮ ದಿನಕ್ಕೆ ಶುಭಾಶಯ ಕೋರಿದ ಎಲ್ಲಾ ಆತ್ಮೀಯರಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು

◼ ಶ್ರೀ ಬಸವರಾಜ  ಭೂತಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು

Friday, October 13, 2023

Sunday, April 2, 2023

ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ...

           ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ...

ತಂದೆ ತಾಯಿಯರ ಆಶಯದಂತೆ  ಐದನೇ ತರಗತಿಯಲ್ಲಿ ಇರುವಾಗಲೇ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು. ಈ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ತಂದೆ-ತಾಯಿಯರ ವಾತ್ಸಲ್ಯದಲ್ಲಿ ಬೆಳೆಯುತಿದ್ದ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಇರುವುದು ಸ್ವಲ್ಪ ಕಷ್ಟವಾಗದೆ ಇರಲಾರದು. ಶಾಲಾ ವಾತಾವರಣಕ್ಕೆ ಕೆಲ ಮಕ್ಕಳು ಬೇಗನೆ ಹೊಂದಿಕೊಂಡರೆ, ಇನ್ನು ಕೆಲ ಮಕ್ಕಳಿಗೆ ಸ್ವಲ್ಪ ಕಷ್ಟವಾಗರಬಹುದು. ಪ್ರಾಂಶುಪಾಲರು, ಶಿಕ್ಷಕರು, ನಿಲಯಪಾಲಕರು, ತೋರಿಸುವ ಪ್ರೀತಿ ಕಾಳಜಿಗೆ ಬರುಬರುತ್ತಾ ಅವರು ಹೊಂದಿಕೊಂಡು ಬಿಡುತ್ತಾರೆ.. 



          ಹುಡುಗಾಟದ ಬುದ್ಧಿ, ತುಂಟಾಟ ಕುಚೇಷ್ಟೆ ಮಾಡೋ ವಯಸ್ಸು. ಇದರ ಮಧ್ಯೆ ಇವರನ್ನ ಸಂಭಾಳಿಸುವುದೇ ಶಿಕ್ಷಕರಾದ ನಮಗೆ ಒಂದು ದೊಡ್ಡ ಸರ್ಕಸ್. ಕ್ಲಾಸಿಗೆ ಕಾಲಿಟ್ಟರೆ ಸಾಕು, ಸರ್ ಆಕೀ ಹೊಡಿತಾಳ್ರಿ,  ಬೈತಾಳ್ರಿ, ಚಿವುಟ್ಯಾಳ್ರೀ, ಚುರ್ಯಾಳ್ರಿ, ಅಕೀ ಓದಿಲ್ರಿ, ಬರದಿಲ್ರಿ.  ಎಪ್ಪಾ ...! ಒಂದಾ, ಎರಡಾ,  ಇವರ ಪ್ರಲಾಪಗಳು.  ಎಲ್ಲವೂ ಸಂಬಳಿಸಿ  ಇನ್ನೇನು ಪಾಠ ಮಾಡಬೇಕು ಅನ್ನುವಷ್ಟರಲ್ಲಿ ಒಂದಿಬ್ಬರು ಬಂದೇ ಬಿಡೋರು ಸರ್ ಹೋಮ್ ವರ್ಕ್ ಚೆಕ್ ಮಾಡ್ರೀ, ಶುದ್ಧಬರ ಚೆಕ್ ಮಾಡ್ರೀ ಅಂತ. ನಾಳೆ ಮಾಡೋಣ ಅಂದ್ರು ಕೇಳ್ತಾ ಇರ್ಲಿಲ್ಲ, ಇವತ್ತೆ ಆಗಬೇಕು. ಆಗ್ಲೀ ಅಂತ ಚೆಕ್ ಮಾಡಾಕ ಕುಳಿತ್ರ, ಸರ್ ನಂದ್ ಮೊದಲ್ರಿ, ನಿಂದ್ ಮೊದಲ್ರಿ ಅಂತ ಜಗಳ ಮಾಡ್ಕೋತ ಮೈಮ್ಯಾಲೆ ಬಿಳೋರು.



ಉಸ್ಸಪ್ಪ..! ಎಂದು  ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕಾಗಿ ಹೊಗತಿತ್ತು. ಆಗಿನ ಮಟ್ಟಕ್ಕ ಅವರ ತುಂಟಾಟ ಸ್ವಲ್ಪ ಸಿಟ್ಟು  ತರಿಸಿದರು, ಅವರ ಮುಗ್ಧ ಮಾತುಗಳು ಕ್ಷಣ ಹೊತ್ತಲ್ಲೆ ಮರಿಸಿ ಬಿಡುತ್ತಿದ್ದವು. ಇದೆಲ್ಲವೂ ನೆನೆಸಿಕೊಂಡು ಮನೆಗೆ ಬಂದು ಒಬ್ಬೊಬ್ಬನೇ ಮನಸಲ್ಲಿ ನಗ್ತಿದ್ದೆ. ಇದೆಲ್ಲಾ ನೋಡಿದ ನನಗೆ ದಿನ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಮಾಡುವ ಪ್ರಾಥಮಿಕ ಶಾಲಾ  ಮಾಸ್ತಾರಗಳು ಬಹಳಷ್ಟು ಗ್ರೇಟ್ ಎನಿಸಿದರು. 

ಶಾಲಾ ಕ್ಯಾಂಪಸ್ ನಲ್ಲಿಯೆ ವಸತಿ ಗೃಹಗಳು ಇರುವುದರಿಂದ ಕುಟುಂಬ ಸಮೇತ ನಾವು ಅಲ್ಲಿ ವಾಸ ಮಾಡುತ್ತೇವೆ. ಎಂ.ಓ.ಡಿ ಡ್ಯೂಟಿ ಮೇಲೋ, ಅಥವಾ ಯಾವದೋ ಕಾರಣಕ್ಕೋ ಹೊರಗಡೆ ಬಂದರೆ ಸಾಕು, ಎಲ್ಲರೂ ಸಾಮೂಹಿಕವಾಗಿ ಎದ್ದುನಿತ್ತು ಪ್ರಣಾಮ್ ಗುರೂಜಿ, ಎಂದು ಜೋರು ಧ್ವನಿಯಲ್ಲಿ ದಿನಕ್ಕೆ ಹತ್ತಾರು ಬಾರಿ ವಂದಿಸುತ್ತಾ ಎದ್ದು ನಿಂತೆ ಬಿಡುವರು. ತುಸು ಕಲ್ಮಶವಿರದ ಮುಗ್ಧ ಮನಸ್ಸುಗಳ ಬಾಯಲ್ಲಿ ಇದನ್ನು ಕೇಳುವುದು ಒಂಥರಾ ಖುಷಿನೆ ಅನಿಸುತಿತ್ತು ನನಗೆ. 

        ಬೇಕು ಅಂತಲೇ ನಾನು ಬರುವಾಗ, ಹೋಗುವಾಗ ಹಿಂದಿ ಪುಸ್ತಕ ಕೈಯಾಗ ಹಿಡಕೊಂಡು ಗಂಭೀರವಾಗಿ ಓದುತ್ತಾ ಕುಳಿತು ಬಿಡುತ್ತಿದ್ದರು. ಅವರ ಉದ್ದೇಶವೇ ನಾನು ಅವರ ಕಡೆ ತಿರುಗಿ ಮಾತಾಡಿಸಬೇಕು ಅನ್ನೋದು.  ಆ ಸಮಯದಲ್ಲಿ ನಾವು ಅವರಿಗೆ ಮಾತಾಡಿಸುವರೆ  ಏನೋ ಒಂಥರಾ ಖುಷಿಸಿಗುತಿತ್ತು. 

        ಬರಬರುತ್ತಾ ಎಂಟು, ಒಂಬತ್ತನೆಯ ತರಗತಿಗೆ ಬಂದಾಗ ಆ ಮೊದಲಿನ ತುಂಟಾಟ, ಚೇಷ್ಟೆಗಳು ಮಾಯವಾಗಿ.  ಸೂಕ್ಷ್ಮ ಸಂವೇದನೆಗಳು ಅವರಲ್ಲಿ ಮೂಡಿದವು. ಮಾತಿನಲ್ಲಿ ನಯ, ವಿನಯ, ಸಂಕೋಚಗಳಂತಹ ಭಾವನೆಗಳು ಕಾಣತೊಡಗಿದವು. ಹುಡುಗಾಟದ ಬುದ್ಧಿ ಹೋಗಿ. ಜವಾಬ್ದಾರಿ ಬಂತು. 

        10ನೇ ತರಗತಿಗೆ ಬಂದಾಗ ಎಲ್ಲರಿಗೂ ಇವರ ಮೇಲೆ ವಿಶೇಷ ಕಾಳಜಿಯಿತ್ತು. ಎಲ್ಲರೂ ಚೆನ್ನಾಗಿ ಓದಬೇಕು ಒಳ್ಳೆಯ ಅಂಕಗಳನ್ನು ತೆಗಿಬೇಕು. ಶಾಲಿಗೆ ಕೀರ್ತಿಯ ಜೊತೆಗೆ. ನಮ್ಮ ವಿಷಯದಲ್ಲೂ ಹೆಚ್ಚಿನ ಅಂಕಗಳನ್ನು ತೆಗಿಯಬೇಕೆನ್ನುವ  ಸ್ವಾರ್ಥವೂ ಇದರಲ್ಲಿ ಅಡಗಿತ್ತು. ಹೀಗಾಗಿ ಎಲ್ಲಾ ಶಿಕ್ಷಕರು  ವಿಶೇಷ ತರಗತಿಗಳು ಘಟಕ ಪರೀಕ್ಷೆಗಳು, ಸ್ಕೂರಿಂಗ್ ಪ್ಯಾಕೆಜ್, ಲರ್ನಿಂಗ್ ಪ್ಯಾಕೆಜ್ ಕೊಟ್ಟು ವೈಯಕ್ತಿಕ ಕಾಳಜಿ ವಹಿಸುತ್ತಾ ಓದಿಸುತಿದ್ದೇವು. ಓದಿನ ಒತ್ತಡವೂ ಹಾಕಿದೇವು. ಹೇಳಿದ ಕೆಲಸ ಮಾಡಿದ್ದಾಗ ಬೈದಿದ್ದೇವೆ ಗದರಿಸಿದ್ದೇವೆ ಅದೇನೇ ಮಾಡಿದ್ದರು ನಿಮ್ಮ ಉತ್ತಮ ಭವಿಷ್ಯದಕ್ಕಾಗಿ. ನಾಳೆ ನೀವು ಉತ್ತಮ ಅಂಕಗಳು ಪಡೆದುಕೊಂಡರೆ ನಿಮಗಿಂತಲೂ ಹೆಚ್ಚಿನ ಖುಷಿ ನಮ್ಮಲ್ಲಿರುತ್ತದೆ.

         ಈಗಾಗಲೇ   ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ. ಇನ್ನೊಂದು ವಾರದಲ್ಲಿ ಪರೀಕ್ಷೆಗಳು ಮುಗಿಯಬಹುದು. ತುಂಟ ಮರ್ಕಟ ಮನಸ್ಸುಗಳ ಕಣ್ಣಂಚು ನೀರಾಗಬಹುದು. ಮಧುರ ನೆನಪುಗಳಿಂದ ತೊಯ್ದು ತೊಟ್ಟಿಕ್ಕಲುಬಹುದು. ನಿಮ್ಮ ವಿದಾಯ ಪ್ರತಿಯೊಬ್ಬ ಶಿಕ್ಷಕ ಶಿಕ್ಷಕಿಯರಿಗೂ ಮನೆಯಿಂದ ಮಗಳು ಹೊದಂತ, ಅಕ್ಕ ತಂಗಿಯರನ್ನು ಕಳುಹಿಸಿಕೊಡುವಂತ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗುವದಂತು ಸತ್ಯ. ಅತ್ತು, ಅಳಿಸಿ ಮನಸ್ಸು  ಭಾರಮಾಡಿ ಹೊರಟು ಹೋಗುವ ಆ ಕ್ಷಣ ನೆನೆಸಿಕೊಂಡರೆ ಮೈ ಝುಂ ಎನುತದೆ. 

          ನನ್ನ ಸೇವಾವಧಿಯಲ್ಲಿ ಸುಮಾರು ಹತ್ತಾರು ಎಸ್ ಎಸ್ ಎಲ್ ಸಿ ಬ್ಯಾಚುಗಳು ಕಳೆದು ಹೋಗಿವೆ. ಕೆಲವರು ಮತ್ತೆ ಹೋಗಿರುತ್ತಾರೆ ಇನ್ನೂ ಕೆಲವರು ನೆನಪಿಟ್ಟು ಶಿಕ್ಷಕರ ದಿನಾಚರಣೆಗೆ ಕಾಲ್ ಮಾಡಿ ಶುಭಾಶಯಗಳು ತಿಳಿಸುತ್ತಾರೆ. ರಕ್ತ ಸಂಬಂಧಕ್ಕಿಂತಲು ಮಿಗಿಲಾದುದ್ದು ಈ ಗುರು ಶಿಷ್ಯರ ಭಾಂದವ್ಯ. ಪ್ರತಿ ವರ್ಷವೂ ಈ ದಿನ ಬಂದರೆ ಸಾಕು ಕಲಿಸಿದ ಗುರುವಿನ ಮನಸ್ಸುಲ್ಲಿ ಏನೋ ಒಂಥರಾ ತಳಮಳ ಕಸಿವಿಸಿ.  ತುಂಟಾಟ, ಚೆಲ್ಲಾಟ, ನೋವು-ನಲಿವುಗಳ ಸಮ್ಮಿಲನ ಸುಮಾರು ಐದು ವರ್ಷಗಳ ಬಾಂಧವ್ಯದ ಕೊಂಡಿ ಅವರ್ಣೀಯ ಅವಿಸ್ಮರಣೀಯ. 

ಪ್ರತಿ ವರ್ಷವು ಇದೇ ರೀತಿ ಅನುಭವ. ಮೌಲ್ಯಮಾಪನ ಕಾರ್ಯ, ಚುನಾವಣೆ ಕಾರ್ಯ, ಮತ್ತು ಬೇಸಿಗೆ ರಜೆಗಳ ಮದ್ಯ ಇವೆಲ್ಲವನ್ನೂ ಮರೆತು ಬಿಡುತ್ತೇವೆ. "ಹಳೆ ನೀರು ಹೋಗಿ, ಹೊಸ ನೀರು ಬರುವಂತೆ"  ಮತ್ತೆ ಶಾಲೆಗಳು ಪ್ರಾರಂಭವಾಗುತ್ತವೆ. ಈ ಶಾಲಾ ನಂದನವನಕ್ಕೆ ಆರರ ಸಸಿಗಳಾಗಿ ಹೊಸ ಮಕ್ಕಳು ಬರುತ್ತಾರೆ. ಮುಗ್ಗುಗಳಾಗಿ ಬೀರಿಯುತ್ತಾರೆ. ನಮ್ಮ ಶಾಲಾ ಅಂಗಣದಲ್ಲಿ ಸೊಗಸಾಗಿ ಅರಳುತ್ತಾರೆ, ಎಲ್ಲೆಡೆ ಸುವಾಸನೆಯ ಕಂಪು ಸೂಸಲು ಹೊರಡುತ್ತಾರೆ. ಭವ್ಯ ಭವಿಷ್ಯದ ಮುನ್ನುಡಿ ಬರೆದು ನಾಳೆಯ ನಾಡಿನ ಒಳ್ಳೆಯ ಪ್ರಜೆಗಳಾಗಲು ಹೊರಟ ನನ್ನ ಮುದ್ದು ಮಕ್ಕಳಿಗೆ ಶುಭ ಹಾರೈಕೆಗಳು.  

ಹೋಗಿ ಬನ್ನಿ ಮಕ್ಕಳೇ... ನಿಮ್ಮ ಭಾವಿ ಭವಿಷ್ಯ ಉಜ್ವಲವಾಗಲಿ... ನೀವು ಕಲಿತ ಈ ಶಾಲೆಯನ್ನು ಮರೆದಿರಿ.. 

ಬಸವರಾಜ ಭೂತಿ, ಹಿಂದಿ ಭಾಷಾ ಶಿಕ್ಷಕರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಶಹಪುರ್

Thursday, March 16, 2023

ಶ್ರೀಮತಿ ಸುರಯ್ಯ ಹಾದಿಮನಿಯವರ ಚೊಚ್ಚಲಕೃತಿ "ಮನದಂಗಳದಿ" ಲೋಕಾರ್ಪಣೆ..

ಶ್ರೀಮತಿ ಸುರಯ್ಯ ಹಾದಿಮನಿಯವರ ಚೊಚ್ಚಲಕೃತಿ "ಮನದಂಗಳದಿ" ಲೋಕಾರ್ಪಣೆ

ಶಹಾಪುರ ತಾಲೂಕಿನ ಬೇವಿನಹಳ್ಳಿ ಕ್ರಾಸ್ ನಲ್ಲಿರುವ  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ  ಪ್ರಾಂಶುಪಾಲರು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಸುರಯ್ಯಬೇಗಂ ಹಾದಿಮನಿ ಅವರ ಕವನಗಳ ಸಂಕಲನ- ಮನದಂಗಳದಿ, ಕೃತಿಯು ದಿನಾಂಕ ೧೯-೦೩-೨೦೨೩ ರಂದು ಲೋಕರ‍್ಪಣೆ ಗೊಳ್ಳುತ್ತಿದೆ. ಇವರ ಕವನ ಸಂಕಲನಕ್ಕೆ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀಗಳು   ಮನದಂಗಳದಿ, ಎಲ್ಲರ ಮನೆಂಗಳ ತಲುಪಲೆಂದು ಶುಭ ಹಾರೈಸಿದ್ದಾರೆ.  
KREIS ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಮೇಶ್ ದೇಸಾಯಿಯವರು ತಮ್ಮ ಆಸಯದ ನುಡಿ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.
ಹುಟ್ಟು ಹುಟ್ಟು ಹೋರಾಟಗಾರ್ತಿ ಹಾಗೂ ಸಾಹಿತಿಗಳಾದ ಶ್ರೀಮತಿ ಮೀನಾಕ್ಷಿ ಬಾಳಿ ಅವರು ಇವರ ಕವನ ಸಂಕಲನಕ್ಕೆ ಮುನ್ನುಡಿ  ಬರೆದು ‘ವೈಚಾರಿಕ ಚಿಂತನೆಯ  ಪ್ರಬುದ್ಧತೆಯನ್ನು ಒಳಗೊಂಡ ಹಾಗೂ ಅಧ್ಯಾತ್ಮದ ಛಾಯೆಯನ್ನು ಇವರ ಕವಿತೆಗಳಿಗೆ ಹಿಡಿದ ಕೈಗನ್ನಡಿಗೆ ಯಾಗಿವೆ  ಎಂದು ಪ್ರಶಂಸಿಸಿದ್ದಾರೆ, 
ಇನ್ನೋರ್ವ ಸಾಹಿತಿಗಳು ಸಮಾಜ ಸೇವಕರಾದ  ಕೆ. ನೀಲಾ ಅವರು ಬೆನ್ನುಡಿಯಲ್ಲಿ  ಕೆಲವು ವಿಡಂಬನಾತ್ಮಕ ಕವನಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕರೆ ನೀಡುತ್ತವೆ ಎಂದು ಶ್ಲಾಘಿಸಿದ್ದಾರೆ. ಯಾದಗಿರಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹೋಟ್ಟಿ ಯವರು ಇವರ ಕೃತಿಗೆ ಶುಭ ಹಾರೈಸಿದ್ದಾರೆ.. 
ಮನದಂಗಳದಿ ಕೃತಿಗೆ ಇವರ ಸಹೋದರರಾದ ವೈದ್ಯ ಸಾಹಿತಿ ಶ್ರೀ ಸಮೀರ್ ಹಾದಿಮನಿಯವರು ಬಿಡಿಸಿದ ವ್ಯಂಗ್ಯ ಚಿತ್ರಗಳು ಮೆರಗು ತಂದಿವೆ.. 
ಮನದಂಗಳದಿ ಕೃತಿಯ ಜೊತೆಗೆ ಇವರ ಸಹೋದರರಾದ ವೈದ್ಯ ಸಾಹಿತಿ ಡಾ. ಸಮೀರ್ ಹಾದಿಮನಿಯವರ ಮೂರು ಕೃತಿಗಳು ಸೇರಿ ಒಟ್ಟಿಗೆ ನಾಲ್ಕು ಕೃತಿಗಳು ಒಂದೇ ದಿನ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷ..  ಲೋಕಾರ್ಪಣೆಗೊಳ್ಳುತ್ತಿರುವ ಈ ಕೃತಿಗಳಿಗೆ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಹರುಷ ವ್ಯಕ್ತಪಡಿಸುವುದರೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ..  ಅಭಿನಂದನೆಗಳು, ಮೇಡಂ💐💐

ಬಸವರಾಜ ಭೂತಿ. ಹಿಂದಿ ಶಿಕ್ಷಕರು


School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...