Monday, October 26, 2020

ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

 


ಬನ್ನಿ, ಸಂಬ್ರಮ...!

ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ-ತಾಯಿ ಬಳಿಯಲ್ಲಿ ಬೆಳೆದಿದಕಿಂತ ಹೆಚ್ಚು, ಆಯಿ ಮುತ್ಯಾನ ಹತ್ರ ಬೆಳೆದಿದ್ದೆ ಜಾಸ್ತಿ. ಆಗ ಅದೊಂದು ವಿಭಕ್ತ ಕುಟುಂಬ ಮನಿತುಂಬ ಮಕ್ಳು. ನವರಾತ್ರಿ ಹಬ್ಬ ಬಂದ್ರ ಸಾಕು ಸಂಭ್ರಮವೋ ಸಂಭ್ರಮ. 

ಹಬ್ಬಕ್ಕಿಂತ ಮೂರನಾಲ್ಕ ದಿನ ಮೊದ್ಲ, ಮನೆ ಸ್ವಚ್ಚಿ ಮಾಡೋ ಮಾಡ್ಬೇಕಾಗ್ತಿತ್ತು. ಅದರಾಗ ಹೇಳಿ ಕೇಳಿ ಸಿಂದಗಿ ಊರಿಗಿ ನೀರಿನ ಬರ ಬ್ಯಾರೆ ಇತ್ತು. ನಾನು ಮತ್ತು ನನ್ನ ಸಣ್ಣಪ್ಪದೆರು ಹೆಚ್ಚು ಕಡಿಮೆ ವಾರಗೆವರೆ ಇದ್ದೆವು. ನಮ್ಮ ಕೆಲ್ಸಾ ಅಂದ್ರ  ಮನಿ ತುಂಬಾ ನೀರ ತುಂಬೊದು ಅಷ್ಟೇ. ಹಿಂಗಾಗಿ ಹಬ್ಬ ಹುಣ್ಣಿಮಿ ಬಂದ್ರ ನಮ್ಗ ಎಲ್ಲಿಲ್ಲದ ಸಂಕಟ ಸುರುವಾಗತಿತ್ತು. ಮನಿ ಮಂದಿಗೆಲ್ಲ ನೀರು ಈಡು ಮಾಡುವದು ಬರಗಾಲದಂತಹ ಊರಾಗ ಸಾಮಾನ್ಯ ಕೆಲಸ ಆಗಿರಲಿಲ್ಲ. 

          ಪೂಜಾರಿಗಳ ಓಣಿಯ ಹೆಗ್ಗೆರೆಪ್ಪನ ದೇವಸ್ಥಾನದ ಹತ್ರ ಇರುವ ಸೇದಿ ಬಾವಿ ಆಗ ಅರ್ಧ ಊರಿಗೆ ನೀರು ಕೊಡ್ತಿತ್ತು. ಹಿಂಗಾಗಿ ಅಲ್ಲಿ ಜನಜಂಗಳಿ ಜಾಸ್ತಿ ಇರುತ್ತಿತ್ತು. ಅದು ನಮ್ಮ ಮನೆಯಿಂದ ಒಂದು ಪರ್ಲಾಗ ದೂರದಲ್ಲಿತ್ತು. ಅದು ತಪ್ಪಿದರ ಮೂರನಾಲ್ಕ ಕಿಲೋ ಮೀಟರ್ ಗಟ್ಟಲೆ ಹ್ಯಾದರು ನೀರ ಸಿಗ್ತಿದಿಲ್ಲ. ನಸುಕಿನ್ಯಾಗ  ಪಾಳಿ ಕಡಿಮಿ ಇರತಾದಂತ ಮನ್ಯಾಗ ನಮ್ಮನ್ನ ನಾಲ್ಕು ಗಂಟೆಗೆ ಎಬ್ಬಿಸಿ, ನೀರ ತುಂಬಲಾಕ  ಕಳಿಸುತ್ತಿದ್ದರು. 
          ಇಬ್ಬರು ಚಿಕ್ಕಪ್ಪರದಾಗ ಒಬ್ಬ ನೀರು ಸೇದಿ ಕೊಡುತ್ತಿದ್ದ, ಇನ್ನೊಬ್ಬ ನನ್ಗ ಎದುರ ಬದರಾಗಿ ನೀರು ತಂದು ಕೊಡುತ್ತಿದ್ದ. ಅಲ್ಲಿಂದ ನಾನು ಮನೆಗೆ ತರುತಿದ್ದೆ. ಉಡುದಾರಕ್ಕೆ ಕಡ್ಡಿ ಹಾಕಿ ಗಟ್ಟಿ ಬಿಗಿದ್ರು ಸರಕಾರ ಶಾಲ್ಯಾಗ ಕೊಟ್ಟ ಖಾಕಿ ಚೆಡ್ಡಿ ಮಾತ್ರ ಅಳಸಾಗಿ ಜಾರೊದು ಬಿಡುತ್ತಿರಲಿಲ್ಲ, ಸೊಂಟದ ಮ್ಯಾಲ ನಿಲ್ಲದ ಚಡ್ಡಿಗಿ ಒಂದು ಕೈ ಹಿಡ್ಕೊಂಡು, ಮತ್ತೊಂದು ಕೈಲೆ ಕೊಡ ಹಿಡಕೊಂಡಿರುತಿದ್ವಿ. ಹಂಗ ಹಿಂಗ  ಸಂಕಟ ಪಟಗೊತ ಮನೆಗೆ ತಂದ ನೀರ ಸುರಿತಿದ್ವಿ.. ದಿಡಿ ಕೊಡ ಹೊತ್ತು  25 ರಿಂದ 30 ಕೊಡ ನೀರ ದಿನಾ  ಬೇಕಾಗುತ್ತಿತ್ತು. ಹಬ್ಬ ಹುಣ್ಣಿ ಬಂದರೆ ವತ್ತಲ, ಹಂಡೆ, ತಪೇಲಿ, ಚಿಳ್ಳಿ-ಮಿಳ್ಳಿ, ಹಿಡಿದು ಎಲ್ಲಾ  ತುಂಬಿಸಿಕೊಳ್ಳುತ್ತಿದ್ದರು. ಇದು ನಮ್ಮ ದಿನಚರಿ.

       ಅದರಲ್ಲೂ ಹೇಳಿ ಕೇಳಿ ಇದು ನವರಾತ್ರಿ ಹಬ್ಬ ನೋಡ್ರಿ  ಮನಿ ಮಂದಿಗೆಲ್ಲ ಮೈತುಂಬ ಕೆಲಸ,  ಇಡೀ ದಿನ ಮನೆ ಸ್ವಚ್ಛ ಮಾಡೋದೆ ಆಗಿರತಿತ್ತು. ಹೆಣ್ಮಕ್ಕಳು ಬಳಕಿ ಇರಲಾರದ ಸಾಮಾನಗಲೆಲ್ಲ ಇಂದೆ ಸ್ವಚ್ಛ ಅಗತಿದ್ದವು. ತಿಕ್ಕಿ ತೊಳ್ದು ತೊರಕಿಗಿ ಮನೆಯ ಸೆಲ್ಫ್ ಮ್ಯಾಗ ಜೋಡಿಸಿ ಇಡ್ತಿದ್ರು. ಮನಿಯ ಕಪಾಟನ್ಯಾಗ  ಕುಂತ  ಕಂಚಿನ ಪಾತ್ರೆಗಳೆಲ್ಲ ಹುಣಸಿ ರಾಡಿ ಹಾಕಿ ತೊಳೆದು ಎದುರಿಗಿ ಕಾಣುವಂಗ ಜೋಡಿಸಿ ಇಡುತಿದ್ದರು. 

    ಸುಣ್ಣ ಹುರಿಮಂಜ  ತಂದು ನೆನೆಯಿಟ್ಟು. ರಾತ್ರಿ ಪೂರಾ  ಗ್ವಾಡಿಗಿ ಬಳಿತಿದ್ವಿ. ಕುಂಬಿ ಮ್ಯಾಲೆಲ್ಲ ಹುರಿಮಂಜ ಇಳಿ ಬಿಡ್ತಿದ್ವಿ, ಜಗುಲಿ, ಮಾಡ, ಕಪಾಟಕಗಿ ಒಂದೆರಡು ಬಣ್ಣಾ ತಂದು ಒಮದೆರೆಡು ಗೆರಿಯಳ್ದು ತೆಂಗಿನ ಜುಬ್ರ ಕಟ್ಟಿ ಕುಂಚಾ ಮಾಡಿ ಚಿತ್ರಾ ಬರಿತಿದ್ವಿ.  ಮುಂಜಮುಂಜಾಳೆ ಎದ್ದು ಕೌದಿ ಕಂಚಡಿ ತುಂಬಿದ, ಅರಿವೆಯ ಗಂಟ ಹೊತ್ಕೊಂಡು ಲಂಡೇನ ಹಳ್ಳ ಹಿಡಿದು, ಜಾಪಾನ ಬಾವಿಗೆ (ನಮ್ಮೂರಲ್ಲಿ ಇರುವ ಬಾವಿ ಹೆಸರು) ಹೋಗಿ ಹಾಸಿಗೆ ಹೊದಿಕಿ ಒಕ್ಕೊಂಡು (ತೊಳೆದು) ಬರುತ್ತಿದ್ದೆವು. 

       ಆವತ್ತ  ಮನ್ಯಾಗ ಹಿರ್ಯಾರು ಹೊಲಕ್ಕೆ ಹೋಗಿ ಹುತ್ತಿನ ಮಣ್ಣು ತಂದು, ಮಾವಿನ ಟೊಳಲ ತೊರಣ ಕಟ್ಟಿ, ಬಾಳಿದಿಂಡ ನೆಟ್ಟು, ಚಂಡುಹೂವ, ಪತ್ರಿ, ಬನ್ನಿ, ಹಿಂಗ ಅನೇಕ ಸಾಮಗ್ರಿಗಳ ತಂದು, ದೇವರ ಜಗಲಿ ಮ್ಯಾಗ ಹಂದರ ಹಾಕ್ತಿದ್ವಿ, ಮನಿ ಬಾಗಿಲಿಗಿ ತೋರಣ ಕಟ್ಟಿ,  ಹುತ್ತಿನ ಮಣ್ಣಾಗ ನಾಲ್ಕೈದು ತರ ಕಾಳ ಮಿಕ್ಸ್ ಮಾಡಿ, ಸಸಿ ಹಾಕಿ, ಅಂಬಾಭವಾನಿ ಹೆಸರನ್ಯಾಗ ದೀಪಾ ಹಾಕ್ತಿದ್ದರು. ಹಬ್ಬ ಮುಗ್ಯಾತನಕಾ ಅದು ಆರದಂಗ ನೋಡಿಕೊಳ್ಳತಿದ್ರು. ನವರಾತ್ರಿ ಮುಗಿಯುವಷ್ಟರಾಗ ಸಸಿಗಳು ಒಂದು ಗೆಣ ಎತ್ತರ ಬೆಳೆದಿರುತ್ತಿದ್ದವು. ದಸರಾ ಹಬ್ಬ ಮುಗಿದ ಬಳ್ಕ ಮನ್ಯಾಗಿನ ಮಕ್ಕಳೆಲ್ಲ ಕೂಡಿ ಸಸಿ ತೆಲಿ ಮ್ಯಾಲ ಹೊತ್ತುಕೊಂಡು ಹೋಗಿ ಕೆರಿಗೊ, ಬಾವಿಗೊ, ಬಿಟ್ಟು ಬರ್ತಿದ್ರು. 

        ಹಬ್ಬದ ದಿನ ನೋಡ ಬೇಕು ನಮ್ಮ ಸಂಭ್ರಮ ಸಡಗರ. ಸಂಜೆ ನಾಲ್ಕಕ್ಕ  ಹೊಸ ಬಟ್ಟಿ ಉಟ್ಕೊಂಡು ಹೋಳಿಗೆ ಕಡುಬು ಉಣ್ಕೊಂಡು, ಕಿಸ್ಯಾ ತುಂಬಾ ಬನ್ನಿ ತುರ್ಕೊಂಡು ಬನ್ನಿ ಮುಡ್ಯಾಕ  ಸಿದ್ಧರಾಗಿ ನಿಂತಿರುತ್ತಿದ್ದೇವು. ಊರಾನ ಹೆಣ್ಮಕ್ಕಳು ಉದ್ದುದ ಸೀರೆ ಉಟ್ಕೊಂಡು ಇದ್ದ ಬಿದ್ದ ಒಡವೆ ವಸ್ತ್ರ ಮೈ ಮ್ಯಾಗ ಹಾಕೊಂಡು ಬನ್ನಿ ಮುಡಿಲಾಕ ಬರ್ತಿದ್ರ ಅಪ್ಸರ್ಯಾರು ಕಂಡಂಗ ಕಾಣ್ತಿದ್ದರು. 

    ಸಂಜಿ ಐದು ಆದರ ಸಾಕು,  ಮನ್ಯಾಗ ಹಿರ್ಯಾರು  ಕುರ್ಚಿಗಿ ಕುತ್ಗೊಂಡು, ಮುಗ್ಳ ನಕ್ಕೋತ ಸ್ವಾಗತ ಕೋರತಿದ್ರು.  ಅಳ್ಯಾ ಬಂದಾನ ಸೊಸಿ ಬಂದಾಳ ಆಡಿಸ್ಯಾಡೊ ಪರಿ ನೋಡ್ಬೇಕು. ಮನಿಗಿ ಬಂದವರ ಒಳಗ ಕರ್ದು, ದೇವ್ರ ಜಗುಲಿಗೆ ಬನ್ನಿ ಮುಡ್ಯಾಕ ಕಳ್ಸತಿದ್ರು. ಜಗಲಿ ಹತ್ತಿರ ಹೋಗಿ, ನಮಸ್ಕಾರ ಮಾಡಿ.  ದೇವರಿಗೆ ಸ್ಪಲ್ಪ ಬನ್ನಿ ಹಾಕಿ, ಜಗಲಿ ಮ್ಯಾಲಿದ್ದ ಬನ್ನಿ, ಪತ್ರಿ ಎಲ್ಲಾ ಕಿಸ್ಯಾ ತುಂಬ್ತಿದ್ವಿ, ಆಮ್ಯಾಲ ದೊಡ್ಡ ಇವರ ಕಾಲಿಗೆ ಬಿದ್ದು ಆಶೀರ್ವಾದ ಪಡಿತಿದ್ವಿ.

 ”ಬನ್ನಿ ಕೊಟ್ಟು, ನಾವು ನೀವು, ಬೆಳ್ಳಿ ಬಂಗಾರದಂಗ ಇರೋಣು ಬರ್ರಿ.... ಕೈ ಹಿಡೀರಿ, ಉಡಿ ಒಡ್ಡರೀ… ಬಂಗಾರ ಬಂಗಾರ ಅಂತಿದ್ರಲ್ಲ, ನನ್ನ ಮಗ ಸಾಕನ್ನಂಗ ಬಂಗಾರ ತಂದಾನ ಬರ್ರಿ… ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕ ಆಗಲ್ಲ, ನಿಮ್ಮ ಮನಿತನಕ ನಾವು ಹೇಳ್ದ ಕೇಳ್ದ ಬಂಗಾರ ತಂದೀವಿ… ಎಷ್ಟು ಬೇಕು ಅಷ್ಟು ತಗೊಳ್ರಿ…”  ಅನ್ನೊ ಆ ಮಾತನ್ಯಾಗ ಎಷ್ಟೊಂದು ಪ್ರೀತಿ ತುಂಬಿರತಿತ್ತು.

 ಓಣ್ಯಾಗಿದ್ದ ಹಿರ್ಯಾರಿಗೆಲ್ಲ ಬನ್ನಿ ಕೊಟ್ಟಾದಮ್ಯಾಲ, ನಾಲ್ಕೈದು ಜನ ಗೆಳ್ಯಾರು ಸೇರಿ. ಊರು ಸುತ್ತಾಕ ಹೊಗ್ತಿದ್ವಿ. ಇಷ್ಟು ದಿನ ಈ ಎಲ್ಲಿ ಬಚ್ಚಿ ಇಟ್ಟಿದ್ರು ಈ ಸೌಂದರ್ಯ ಅನುವಂಗ ಸಿಂಗಾರ ಮಾಡ್ಕೊಂಡು ಹೆಂಗಳ್ಯಾರು ಎದುರಿಗಿ ಬರ್ತಿದ್ರ, ಅವ್ರ ನೊಡಿ ನಾವು ಮನ್ಸನ್ಯಾಗ ಮಂಡಿಗಿ ತಿಂತಿದ್ವಿ. ಊರಾನ ದೇವರಿಗಿ ಬನ್ನಿ ಮುಡಿಯುವ ನೆಪ ಮಾಡಿ. ಅವರ ಹಿಂದಿಂದ ಸುತ್ಯಾಡಿ ಊರ ಸುತ್ತುತ್ತಾ. ಚೌಕ ಚೌಕ ತಿರುಗ್ಯಾಡಿ ದೇವಿಗಿ ಕೈ ಮುಗಿದು. ಪ್ರಸಾದ ಚಪ್ಪರಿಸಿ ಬರ್ತಿದ್ವಿ. 

ಉತ್ತರ ಕರ್ನಾಟಕ ಭಾಗದಾಗ ವಿಜಯದಶಮಿ ದಿನದಂದ ಜನ ಪತ್ರಿ ಗಿಡದ ಎಲ್ಯಾಗ ಬನ್ನಿ ಎಲಿಗಳನ್ನು ಸೇರಿಸಿ ಮಾಡಿದ ವಸ್ತುವಿಗಿ ಗಟ್ಡಿ ಬಂಗಾರದ ಎಂದೂ ಕರಿತಾರ. ಬನ್ನಿ ಗಟ್ಟಿ ಹಿಡ್ಕೊಂಡು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. 

ಅಂದು ಊರ ಗೌಡ್ರು ಹೊಲದಲ್ಲಿದ್ದ ದೇವಿ ಗುಡಿಗಿ ಪಲ್ಲಕ್ಯಾಗ ಹೊಗಿ ಬನ್ನಿಗಿಡಕ್ಕ ಪೂಜಿ ಮಾಡಿ, ನನ್ನ ಮುಡಿಕೊಂಡು ಊರ ಜನರೆಲ್ಲ ಪರಸ್ಪರ ಬನ್ನಿ ಹಂಚಕೊಂಡು ನಲಿತಾರ. ಬನ್ನಿ ಕೊಟ್ಟು ಬಂಗಾರ ಪಡಿಯುವ ಈ ಹಬ್ಬ ಹಳಸಿದ ಸಂಬಂಧ ಬೆಸ್ತು ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ ಎಂದು ಹೆಳಬಹುದು.

   ಆ ದಿನಗಳಲ್ಲಿ ದೂರದಲ್ಲಿರುವ ಸಹೋದರ ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಪತ್ರದಲ್ಲಿ ಬನ್ನಿಯಿಟ್ಟು ಶುಭಾಶಯ ಕೊರ್ತಿದ್ವಿ. ಈಗ ಕಾಲ ಬದಲಾಗಿ ಯುವಕ-ಯುವತಿಯರ ಕೈಯಾಗ ಸ್ಮಾರ್ಟ್ಫೋನ್ಗಳು ಬಂದು, ಆ ಸಂಪ್ರದಾಯವೆಲ್ಲ ಮರೆತು ಹೊಗಿದೆ. ಬರೀ ಮೊಬೈಲ್ನಲ್ಲಿ ಪಟ ತೆಗೆದು ಬಂಧು-ಮಿತ್ರರಿಗಿ ಕಳ್ಸಿ ಶುಭ ಕೋರುವ ಕಾಲ ಇದು.

ಒಟ್ಟಾರೆಯಾಗಿ ಹೆಳಬೆಕಂದ್ರ ಪವಿತ್ರವಾದ ಈ ಹಬ್ಬ ದೊಡ್ಡವರು ಸಣ್ಣವರು ಅನ್ನದೆ. ಸರ್ವ ಧರ್ಮಿಯರು  ಕೂಡಿ ಆಚರಿಸುವ ಹಬ್ಬ ಇದು,. ಬದುಕಿನ ಜಂಜಾಟದಾಗ, ಹತ್ತು ಹಲವು ಸಮಸ್ಯೆಗಳ ಸುಳಿಗಿ ಸಿಲುಕಿ ಹಳಸಿದ ಸಂಬಂಧಕ್ಕೊಂದು ಬಂಧ ಬೆಸೆಯುವ ಹಬ್ಬ ಇದು. ನೋವು ನಲಿವಿನಲ್ಲಿ ಸರಸ ವಿರಸದಲ್ಲಿ ಮುನಿಸಿಕೊಂಡವರು ಒಂದಾಗಿ ಚೆಂದಾಗುವ ದಿನವೆ ಮಾನಮ್ಮಿ. ಉಲ್ಲಾಸದಿಮಂದ ಕೂಡಿ ಬಾಳುವದು ತಿಳಿಸಿ ಬದುಕಿಗೆ ಈ ದಿನ ಹೊಸ ಅರ್ಥ ಕಲ್ಪಿಸಿ ಕೊಡುತ್ತದೆ.

**************************************

ಹವ್ಯಾಸಿ ಬರಹಗಾರರು:- ಬಸವರಾಜ ಭೂತಿ, ಶಿಕ್ಷಕರು ಸಿಂದಗಿ

ಮೋ. ನಂಬರ 9900804567


1 comment:

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...