Thursday, November 5, 2020

 

   ಬಣ್ಣದ ಬೊರಂಗಿ

 




ಚುಮುಚುಮು ಚಳಿಯಲ್ಲಿ ಬೆಳಿಗ್ಗೆ ನೀರಿನ ದೊಡ್ಡ ಕಾಲುವೆ ದಾರಿ ಹಿಡಿದು ವಿಹಾರಕ್ಕೆ ಹೋಗುವಾಗ ಸೂರ್ಯನ ಕಿರಣಗಳು ಮರದ ಟೊಳಲುಗಳ ಸಂಧಿಯಿಂದ ಇಣುಕಿ, ನನ್ನ ಮೈಗೆ ತಾಗಿ, ಒಂತರಾ ಹಿತ ನೀಡುತ್ತಿತ್ತು. ದೂರದ ಬೆಟ್ಟದ ತುದಿಯಲ್ಲಿ ಹೊಂಬಣ್ಣದಲ್ಲಿ ಮಿಂದೆದ್ದಂತೆ ತಾಯಿ ಮಾಡಿಲಿಂದ ಪ್ರಕೃತಿ ಬೆಳಗಲು ಸೂರ್ಯ ಹೊರಬರುತ್ತಿದ್ದ ಸೂರ್ಯನ ದಡದ ಮೇಲಿನ ಪೊದೆಗಳಲ್ಲಿ ಹಾಯ್ದ ಸೂರ್ಯನ ಪ್ರತಿಬಿಂಬ ನೀರಲ್ಲಿ ನೋಡಲು ಕಣ್ಣೆರಡು ಸಾಲದಾಗಿತ್ತು.


ಹಾಗೆಯೇ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಸ್ವಲ್ಪ ಮುಂದೆ ಹೋಗಿ, ಅಲ್ಲೊಂದಿಷ್ಟು ವಿಶಾಲವಾದ ಬಂಡಿಯ ಮೇಲೆ ಕೈಕಾಲುಗಳನ್ನು ಅಲ್ಲಾಡಿಸುತ್ತ ನಿಂತೆ. ಅಲ್ಲೇ ಪಕ್ಕದಲ್ಲಿದ್ದ ಒಂದು ಬನ್ನಿಯ ಕುರುಚಲು ಕಂಟಿಯ ಮೇಲೆ ಬಿದ್ದ ಸೂರ್ಯನ ಕಿರಣಕ್ಕೆ ಒಮ್ಮೆಲೇ ಪಕ್ಕನೆ ಏನೋ ಹೊಳೆದಂತೆ ಅನಿಸಿತು. ಸ್ವಲ್ಪ ಹತ್ತಿರ ಬಂದು ನೋಡಿದೆ, ನಗಾರಿ ಬೋರಂಗಿ ಬನ್ನಿ ಮರದ ಎಲೆಗಳನ್ನು ತಿನ್ನುತ್ತಿತ್ತು. ಅದನ್ನು ನೋಡುತ್ತಲೇ ನಾನು ಒಮ್ಮೆಲೆ ನನ್ನ ಬಾಲ್ಯಕ್ಕೆ ಮರಳಿ ಬಿಟ್ಟೆ.

ನಾಲ್ಕೈದು ಜನ ಸ್ನೇಹಿತರು ಸೇರಿ ಬೋರಂಗಿ ಹುಡುಕಲು ಹೊಲ ಹೊಲ ಅಡ್ಡಾಡಿ, ಬನ್ನಿ ಕಂಟಿ, ಬಾರಿ ಕಂಟಿ, ಸಿಗರ ಕಂಟಿ, ಹೀಗೆ ಕಂಟಿ ಕಂಟಿ ಅಡ್ಡಾಡಿ, ಬೋರಂಗಿ ಹುಡುಕಿ ತರುತ್ತಿದ್ದೇವು. ಒಂದು ವೇಳೆ ಬೋರಂಗಿ ಸಿಗದಿದ್ದಾಗ ಅಪ್ಪನಿಗೆ ಕಾಡಿ ಬೇಡಿ ಹತ್ತೋ ಇಪ್ಪತ್ತೋ ಪೈಸೆ ಇಸುಕೊಂಡು ಹುಲ್ಲು ಬಾಜಾರಕ್ಕೆ  ( ಈಗಿನ ತರಕಾರಿ ಮಾರುಕಟ್ಟೆಯಂತೆ ಆಗ ಪ್ರತಿ ದಿನ ಸಾಯಂಕಾಲ  ದನಕರುಗಳಿಗಾಗಿ ಹುಲ್ಲಿನ ಬಜಾರ ನೆರೆಯುತಿತ್ತು)  ಬರುತ್ತಿದ್ದೆವು. ಅಲ್ಲಿ ಕೆಲವರು ಹುಲ್ಲು ಮಾರುವರು ಹುಲ್ಲಿನ ಜೊತೆಗೆ ಹೊಲದಲ್ಲಿ ಸಿಕ್ಕ ಬೋರುಹುಳು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡು ಬರುತ್ತಿದ್ದರು. ಕಂಚ್ ಬೋರಂಗಿಯಾದರೆ ಹತ್ತು ಪೈಸೆ, ನಗಾರಿ ಅಥವಾ ಬೆಣ್ಣೆ ಬೋರಂಗಿಯಾದರೆ ಇಪ್ಪತ್ತು ಪೈಸೆ, ಕುಡ್ಡ ಬೋರಂಗಿಗೆ ಐದು ಪೈಸೆ, ಕೇಳುತ್ತಿದ್ದರು. ನಾವು ಇಪ್ಪತ್ತು ಪೈಸೆ ಕೊಟ್ಟು ನಗಾರಿ ಬೋರಂಗಿನೆ ಕೊಳ್ಳುತಿದ್ದೇವು. ನಗಾರಿ ಬೋರಂಗಿ (ಬೆಣ್ಣೆ ಬೋರಂಗಿ ಅಂತಲೂ ಕರೆಯುತ್ತಾರೆ) ಬಾರೀ ಬೇಡಿಕೆ ಇತ್ತು. ಯಾರ ಹತ್ತಿರ ನಗಾರಿ ಬೋರಂಗಿ ಇರುತ್ತದೋ ಅವರಿಗೆ ಬಾರೀ ಮರ್ಯಾದೆ.


ಬೋರಂಗಿ ತಂದು ಅದರ ಕುತ್ತಿಗೆಗೆ ಒಂದು ದಾರ ಕಟ್ಟಿ. ಅದು ಪಕ್ಕ ಬಿಚ್ಚಿ ಹಾರಾಡುವದು ಕಂಡು ಖುಷಿಪಡುತ್ತಾ ಹೊರಗೆ ಬಂದು ಸ್ನೇಹಿತರ ಜೊತೆ ಆಡುತ್ತ ನಿಂತ್ರೆ, ಮತ್ತೆ ಮನೆಗೆ ಬರುವುದು ಹಸಿವಾದಾಗಲೆ. ಕೆಲವು ಸಲ ಬೊರಂಗಿಗಳ ಜೊತೆಗೆ ಜಿದ್ದು ಕಟ್ಟುತಿದ್ದೇವು. ಎಲ್ಲರೂ ಬೋರಂಗಿಗಳನ್ನೂ  ಅಂಗಾತ ಮಲಗಿಸುತ್ತಿದ್ದೇವು ಯಾರ ಬೋರಂಗಿ ಮೊದಲ ಇರುತ್ತದೆಯೋ ಅವರು ಗೆದ್ದಂತೆ. ಅದಕ್ಕೆ ಹುರಿದುಂಬಲು ಆಕಡೆ ಈಕಡೆ ನೆಲಕ್ಕೆ ಬೆರಳ ತುದಿಯಿಂದ ತಿವಿಯುತ್ತಾ.

"ನಿಮ್ಮಪ್ಪ ನಿಮ್ಮವ್ವ

ಕೈಕಾಲು ಕಟ್ಕೊಂಡು

ಬಾವ್ಯಾಗ ಬಿದ್ದಾರ

ಏಳಲೇ ಬೋರಂಗಿ" ಎಂದು ಹಾಡುತ್ತಿದ್ದೇವು,

ಕೇವೊಂದು ಕಡೆ ಬೋರುಹುಳ ನೆಲಕ್ಕೆ ಹಾಕಿ ಡಬ್ಲ್ಯೂಡಬ್ಲ್ಯೂಎಪ್ ನಲ್ಲಿ ನೆಲಕ್ಕೆ ಕೈ ಬಡಿದಂತೆ,  "ಹಾರಲೆ ಹನುಮ, ಹಾರಲೇ ಹನುಮ" ಎಂದು ಒಂದೇ ಸವನೆ ಚೀರುತ್ತ. ಅಂಗಾತ ಬಿದ್ದು ಒದ್ದಾಡುತ್ತಿದ್ದ ಬೊರಂಗಿ  ಬೋರಲ ಬಿದ್ದಾಗ ಆಗುವ ಆನಂದ ಅಷ್ಟಿಷ್ಟಲ್ಲ.

ಬನ್ನಿ ಮರದಲ್ಲಿ ಸಿಗುವ ಈ ಕೀಟವನ್ನು ಕಂಚಿ ಬೋರಂಗಿ, ಬೆಣ್ಣೆ ಬೋರಂಗಿ, ನಗಾರಿ ಬೋರಂಗಿ, ಎಂದು ಕರೆದರೆ. ಜೋಳದ ಹೊಲದಲ್ಲಿ ಸಿಗುವಾ ಈ ಕೀಟವನ್ನು ಸಜ್ಜಿ ಬೋರಂಗಿ ಎಂದು, ಪೊದೆಗಳ ಮೇಲೆ ಸಿಗುವ ಈ ಕೀಟವನ್ನು ಉತ್ತರ ಕರ್ನಾಟಕದ ಕಡೆಗೆ ಕುಡ್ಡ ಬೋರಂಗಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಕೀಟವನ್ನು ಒಂದೊಂದು ಕಡೆ ಒಂದೊಂದು ಇಂದಲು ಕರೆಯುತ್ತಾರೆ. ಬೋರಂಗಿ, ಬೋರುಳ, ಜೀರುದುಂಬಿ, ಜೀರುಂಡೆ, ಜೀರುಂಬೇ, ಜೀರ್ಜಂಬೇಹೀಗೆ.  ಬಣ್ಣ ಬಣ್ಣದ ರೆಕ್ಕೆಯುಳ್ಳ, ನೋಡಲು ಆಕರ್ಷಣೀಯವಾದ, ಯಾರಿಗೂ ತೊಂದರೆ ಮಾಡದ, ಗಿಡಗಳ ಮೇಲೆ ಪೊದೆಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಈ ಕೀಟ ಪ್ರಭೇದಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. 

ದಿನಪೂರ್ತಿ ಡಿ ರಾತ್ರಿ ಮಲಗುವಾಗ ಒಂದು ಕಡ್ಡಿ ಪಟ್ಟಣದಲ್ಲಿ ಬನ್ನಿ ತಪ್ಲ, ಸ್ವಲ್ಪ ಜೋಳದ ಹಿಟ್ಟು ಹಾಕಿ ದಾರ ಸುತ್ತಿ ತತ್ತಿ ಹಾಕಲು ಇಡುತ್ತಿದ್ದೇವು. ಬೆಳಗ್ಗೆ ಎದ್ದ ತಕ್ಷಣ ಮೊದಲು ಕಡ್ಡಿ ಡೆಬ್ಬಿ ತೆಗೆದು, ಅದು ತತ್ತಿ ಹಾಕಿರಬಹುದು ಎಂಬ ಕುತೂಹಲದಿಂದ ನೋಡುತ್ತಿದ್ದೆವು. ಒಂದು ವೇಳೆ ಅದು ತತ್ತಿ ಹಾಕಿದ್ದಾರೆ. ಖುಷಿಯಿಂದ ಜಿಗದಾಡಿ ಕುಣಿದಾಡಿ, ಸ್ನೇಹಿತರೆಲ್ಲರಿಗೂ ಹೇಳುತ್ತಿದ್ದೆವು. "ನನ್ನ ಬೋರಂಗಿ ತತ್ತಿ ಹಾಕಿದೆ, ನಾಳೆ ಅವು ಮರಿಯಾಗುತ್ತವೆ" ಎಂದು. ಎರಡು-ಮೂರು ದಿನ ಜೀವಂತವಿದ್ದು, ಬೆಳಗಾಗುವಷ್ಟರಲ್ಲಿ ಬೋರಂಗಿ ಸತ್ತುಹೋಗಿದೆ ಹೆಚ್ಚು. ಮರಿ ಹಾಕಿದ್ದು ನಾನು ಒಮ್ಮೆಯೂ ನೋಡಿರಲಿಲ್ಲ. 

ಹಿಂದೆ ಊರ ಜಾತ್ರೆಗೆ ಮುಂಚೆ ದೊಡ್ಡಾಟ ಆಡುವ ಸಲುವಾಗಿ ಚಾವಡಿಯಲ್ಲಿ ಒಂದು ತಿಂಗಳು ಮೊದಲೇ ಪಾತ್ರದಾರಿಗಳು ಬೈಟಾಕಿ ಹಾಕುತ್ತಿದ್ದರು. ಪೌರಾಣಿಕ ಪಾತ್ರಗಳು ಆದ್ದರಿಂದ ಎಲ್ಲರಿಗೂ ತಲೆಯ ಮೇಲೆ ಕಿರೀಟಗಳು ಇರುತ್ತಿದ್ದವು. ರಾತ್ರಿ ವೇಳೆಯಲ್ಲಿ ಮಿರ ಮಿರ ಮಿಂಚಲೆಂದು, ಇಂತಹ ಬೋರು ಹುಳದ ಪುಕ್ಕಗಳನ್ನು ಕಿರೀಟಕ್ಕೆ  ಅಂಟಿಸಿಕೊಂಡು ಶೃಂಗರಿಸಿಕೊಳ್ಳುತ್ತಿದ್ದರು. ರಾತ್ರಿ ವೇಳೆಯಲ್ಲಿ ಮಿರ-ಮಿರ ಮಿಂಚುತ್ತಿದ್ದವು.  ಹೀಗೆ ಏನೇನೋ ಬಾಲ್ಯದ ಘಟನೆಗಳನ್ನು ನೆನಪುಗಳನ್ನು ಮಾಡುತ್ತಿರುವಾಗಲೇ. ಹೀಗೆ ಏನೇನೋ ಬಾಲ್ಯದ ಘಟನೆಗಳನ್ನು ನೆನಪುಗಳನ್ನು ಮಾಡುತ್ತಿರುವಾಗಲೇ.  ಒಮ್ಮೆಲೆ ನಾನು ಕಲ್ಪನಾ ಲೋಕದಿಂದ ವಾಸ್ತವ ಸ್ಥಿತಿಗೆ ಬಂದೆ.

ಬನ್ನಿ ಮರದಿಂದ ಬೋರಂಗಿಯನ್ನು ಸಾವಕಾಶವಾಗಿ ಬಿಡಿಸಿಕೊಂಡು, ನನ್ನ ಮಕ್ಕಳಿಗೆ ತೋರಿಸುವ ಉದ್ದೇಶದಿಂದ, ಮೆಲ್ಲನೆ ಅಂಗೈಯಲ್ಲಿ ಹಿಡಿದುಕೊಂಡು ಭರಭರನೆ ಮನೆಯಕಡೆ ಹಾದಿ ಹಿಡಿದೆ. ಮನೆಗೆ ಬರುವಷ್ಟರಲ್ಲಿ ನನ್ನ ಎರಡು ಮಕ್ಕಳು ಮನೆಯಲ್ಲಿ ಆಡುತ್ತಿದ್ದವು. ಒಮ್ಮೆಯೂ ಈ ಹುಳವನ್ನು ನೋಡದ ನನ್ನ ಮಕ್ಕಳು ಬೋರಂಗಿಯನ್ನು ಕಂಡ ತಕ್ಷಣ  ಅಂಜಿ ಚ್ಚಟ್ಟನೆ ಚೀರತೊಡಗಿದರು. ನಾನು ಅವರಿಗೆ ತಿಳಿಸಿ ಹೇಳುತ್ತಾ. ಹಾಗೂ ಹೀಗೂ ಮಾಡಿ ಅವರ ಕೈಯಲ್ಲಿ ಕೊಟ್ಟು ಒಂದು ಫೋಟೋ ತೆಗೆಸಕೊಂಡು ಹೆಚ್ಚಿಗೆ ಅದಕ್ಕೆ ಹಿಂಸೆ ಮಾಡುವುದು ಬೇಡವೆಂದು ಅದಕ್ಕೆ ಹಾರಿಬಿಟ್ಟೆವು.

 

ಬರಹಗಾರರು- ಬಸವರಾಜ ಭೂತಿ. ಸಿಂದಗಿ

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಶಹಾಪುರ

ಮೊ. ನಂ. – 9900804567

 


No comments:

Post a Comment

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...