Wednesday, December 13, 2023

ಬರದ ಬರೆ

 


ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬತ್ತದ ಕಟಾವು ಜೋರಾಗಿಯೇ ನಡೆದಿತ್ತು. 

ಅಲ್ಪ ಸ್ವಲ್ಪ  ಕಾಲುವೆ ನೀರಾವರಿ ಆಶ್ರಿತ ಹತ್ತಿ ಗಿಡಗಳು ಕೆಲವೆಡೆ ಒಡೆದು ನಿಂತು, ಬೆಳ್ಳಿ ಮೋಡದಂತೆ ಅರಳಿ ಕಂಗೊಳಿಸುತಿದ್ದರು ಅವುಗಳಿಗೆ ಈ ವರ್ಷದ ಮಾರ್ಕೆಟ್ ನಲ್ಲಿ ಬೆಲೆಯಿಲ್ಲ. ತೊಗರಿ ಬೆಳೆಗೆ ಮಾರ್ಕೆಟ್ ನಲ್ಲಿ ಬೆಲೆಯಿದ್ದರೂ ಜೂಮ್ ಹಾಕಿ ನೋಡಿದರು ಈ ವರ್ಷ ಕಾಯಿ ಬಿಟ್ಟಿಲ್ಲ. ಒಣ ಬೇಸಾಯದ ಮಳೆ ಅವಲಂಬಿತ ಕೆಲವು ಬೆಳೆಗಳು ಮಳೆ ಇರದೆ,  ನೆಲದಿಂದ ಮೇಲೆಳಲಾಗದೆ ರೋಗ ಹತ್ತಿ, ಕುರುಚಲು ಒಡೆದು, ಬಾಯಾರಿ ಒಣಗಿ ನಿಂತಿವೆ. 

ಯಾದಗಿರಿ ಜಿಲ್ಲೆಯ ಗಡಿ ದಾಟಿ, ವಿಜಯಪುರ ಜಿಲ್ಲಾ ಗಡಿಯೊಳಗೆ ಕಾಲಿಡುತ್ತಿದ್ದಂತೆಯೆ ನೆಟೆಯೊಡೆದು ನಿಂತ ಹೊಲಗದ್ದೆಗಳು ಇನ್ನೂ ಹೆಚ್ಚಾಗಿಯೇ ಕಾಣುತ್ತಿದ್ದವು. 

ವಿಜಯಪುರ ಜಿಲ್ಲೆಯಲ್ಲಿ ಹೆಸರಿಗೆ ಪಂಚ ನದಿಗಳು ಹರಿದರು ಅದರ ಸವಲತ್ತು ರೈತರಿಗೆ ದೊರಕದು. 500, 700 ಅಡಿಗಳಷ್ಟು ಬೋರ್ವೆಲ್ ಕೊರೆದರು ನೀರು ಬೀಳದೆ ಅತಿ ಹೆಚ್ಚು ರೈತರು ಒಣ ಬೇಸಾಯವೆ ಅವಲಂಬಿಸಿದ್ದಾರೆ. ಮಳೆಯ ಮೇಲೆಯೇ ನಂಬಿಕೆಯಿಟ್ಟು ಬದುಕು ಸಾಗಿಸುತ್ತಾರೆ. ಬರಗಾಲ ಬಿದ್ದರೆ ಅಲ್ಲಿ ಇಲ್ಲಿ ಸಾಲ ಮಾಡಿ, ಮಹಾರಾಷ್ಟ್ರಕ್ಕೆ ಗುಳೆ ಹೋಗುವ ರೈತರ ಪರಿಸ್ಥಿತಿ ಕಂಡು ಮನಸ್ಸಿಗೆ ಸ್ವಲ್ಪ ಕಸಿವಿಸಿ ಆಯಿತು. 

ಈ ವರ್ಷ ಬರದಿದ್ದರೆ ಏನಾಯ್ತು. ಮುಂದಿನ ವರ್ಷ ಬಂದಿತು. ಭೂತಾಯಿ ಮನಸು ಮಾಡಿದರೆ ಒಂದೇ ವರ್ಷದಲ್ಲಿ ನಮ್ಮ ಸಾಲ ತೀರಿತು. ಎಂಬ ಆಶಾಭಾವನೆಯೊಂದಿಗೆ ಬದುಕು ಸಾಗಿಸುವ ನಮ್ಮ ಮುಗ್ದ ಮನಸ್ಸಿನ ರೈತರಿಗೆ, ನಾನು ನನ್ನ ಮನಸಲ್ಲಿಯೇ ಸೆಲ್ಯೂಟ್ ಮಾಡುತ್ತಾ ಸುಮ್ಮನಾದೆ.


ಒಬ್ಬ ರೈತನ ಮಗನಾದರಿಂದ ಅವರು ಪಡುವ ಕಷ್ಟ, ಯಾತನೆ, ಬಹಳ ಹತ್ತಿರದಿಂದ ಕಂಡು ಅನುಭವಿಸಿದವನು ನಾನು. ಹೆಸರಿಗೆ ರೈತ ದೇಶದ ಬೆನ್ನೆಲುಬು. ಅವನ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ಅವನ ಹೆಸರಲ್ಲಿ ರಾಜಕಾರಣ ಮಾಡುವ ರಾಜಕಾರಣಿಗಳಿಗು ಕಿಂಚಿತ್ತು ಚಿಂತೆ ಇಲ್ಲ. ಅವನು ಬೆಳೆದ ಬೆಳೆಗೆ ಮಾರ್ಕೆಟ್ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದು ರೈತರ ಪರಿಸ್ಥಿತಿ. ಎಷ್ಟೋ ಸಲ ರೈತ ನಡು ರಸ್ತೆಯಲ್ಲೆ ತಾನು ಬೆಳೆದ ಬೆಳೆ ಸುರಿದು ಬರಿಗೈಲೆ ಮನೆಗೆ ಹೋದ ಘಟನೆಗಳು ಇವೆ. ಸರಕಾರಗಳು ಈ ಕಡೆ ಗಮನಹರಿಸಬೇಕಿದೆ, ಅವನ ಜೀವನಕ್ಕು ಭದ್ರತೆ ನೀಡಬೇಕಿದೆ. ಎಂದು ಹೀಗೆ ಏನೇನೋ ಯೋಚಿಸುತ್ತಾ ಹೋಗುವಷ್ಟರಲ್ಲಿ ಊರು ಬಂದೇಬಿಡ್ತು. 

ಮರುದಿನ ಸ್ನೇಹಿತರೊಬ್ಬರ ಬೈಕ್ ಹತ್ತಿ ಹೊಲಕ್ಕೆ ಬಂದೇ. ಬರುವಷ್ಟರಲ್ಲಿ ನಮ್ಮ ತಂದೆಯವರು ಹತ್ತಿ ಗಿಡದಲ್ಲಿ ಅಲ್ಪಸ್ವಲ್ಪ ಕಾಯಿಗಳಿದ್ದರೂ ಅವುಗಳನ್ನು ಬುಡ ಸಮೇತ ಕಿತ್ತೆಸೆಯುತ್ತಿದ್ದರು. ಹೊಲಕ್ಕೆ ಹೋದವನೇ ಸ್ವಲ್ಪ ಯೋಗ ಕ್ಷೇಮ ವಿಚಾರಿಸಿ,  ಗಿಡಗಳನ್ನು ಏಕೆ ಕೆತ್ತುತ್ತಿದ್ದೀರಿ ಇನ್ನು ಕಾಯಿಗಳಿಗೆ ಇವೆ, ಇನ್ನೊಂದು ಬೀಡು ಬಿಡಿಸಿಕೊಳ್ಳಬಹುದಲ್ಲ ಎಂದೆ. 

ಅದಕೆ ನಮ್ಮ ತಂದೆಯವರು ಮರುತ್ತರವಾಗಿ ಮಾರ್ಕೆಟ್ ಹತ್ತಿಗೆ ಬೆಲೆ ಇಲ್ಲ. ಹತ್ತಿ ಬಿಡಿಸಿದವರ ಕುಳಿನು ಹೊಂಡಲ್ಲ. ಹೋಲ ಮಾಡಿದವರಿಗೆ ಈ ವರ್ಷ ಕೈಲಿಂದ ಕೊಡಬೇಕು. ಏನು ಮಾಡೋದು ಬಂದಷ್ಟು ಬರಲಿ ಅಂತ ಹತ್ತಿ ಕಿತ್ತಿ ಗೋದಿ ಹಾಕೋಣ ಅಂತ  ವಿಚಾರ ಮಾಡಿದ್ದೇನೆ ಅಂದರು. 


ಒಕ್ಕುಲುತನದಲ್ಲಿ ಅವರಿಗಿರುವ ಅನುಭವ ಮುಂದೆ ನಾವೆಲ್ಲಿ,  ಮನಸಲ್ಲಿಯೇ ತಿಳಿದು ಸುಮ್ಮನಾಗಿ, ಅಲ್ಲಲ್ಲಿ ಒಡ್ಡಿಗೆ ಬೆಳೆದ ಕೆಲ ತರಕಾರಿ ಹರಿದು ಬಾಯಿ ತಿನ್ನುತ್ತಾ. ಒಣ ಬೇಸಾಯದ ಸ್ವಂತ ಹೊಲದ ಸ್ಥಿತಿ ಹೀಗಿರಬಹುದು ಅಂತ ತಿಳಿದು ಆಕಡೆ ಸ್ನೇಹಿತನೊಂದಿಗೆ ಹೆಜ್ಜೆ ಹಾಕಿದೆ. 

ಅಕ್ಕ ಪಕ್ಕದ ಮಳೆ ಆಶ್ರಿತ ಹೊಲ ಗದ್ದೆಗಳಲ್ಲಿ ಒಂದೆರಡು ಮಳೆಗೆ ಮೊದಲಿಗೆ ಚೆನ್ನಾಗಿಯೇ ಬೆಳೆದಿದ್ದ ಬೆಳೆಗಳು, ಈಗ  ಬೀಸುವ ಒಣ ಮಸುಂಟಗಿ ಗಾಳಿಗೆ ಹಿಡಿದ ಫಲವೆಲ್ಲ ಉದುರಿ ನಿಂತಿದ್ದವು,  ಊಬು 

ಕಡ್ದ ಬೆಳೆದು ದನಕರಿಗೂ ದನ ಕರಗಳಿಗೂ ತಿನ್ನಲು ಬರದಂತಾಗಿದ್ದವು. ಹೊಲಗದ್ದೆಗಳಲ್ಲಿ ಹಾಯ್ದು ಹೋಗುವಾಗ, ಊಬು ಕಡ್ಡಿಗಳು ಬೂಟು ಪ್ಯಾಂಟಿನ ತುದಿಗೆ ಚುಚ್ಚಿ ಮನಸ್ಸಿಗೆ ಇನ್ನಷ್ಟು ಗಾಯಗಳು ಮಾಡಿದವು.


ಅಲ್ಲೇ ಪಕ್ಕದಲ್ಲಿ ಇದ್ದ ನಮ್ಮ ಹೊಲದಲ್ಲಿ ಹೋಗಿ ಬೂಟು ಪ್ಯಾಂಟಿಗೆ ಮೆತ್ತಿದ್ದ ಯೂಬು ಕಡ್ಡಿಗಳನ್ನು ತೆಗೆಯುತ್ತಾ, ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟೆ. ಒಂದೆರಡು ನೀರು ಹಾಯಿಸಿದ ತೊಗರಿ ಹೊಲ ಅಷ್ಟೇನೂ ಅಲ್ಲದಿದ್ದರೂ ಅಲ್ಲಲ್ಲಿ ಸ್ವಲ್ಪ ಹೂ ಬಿಟ್ಟು ಕಾಯಿ ಹಿಡಿದು ನಿಂತಿತ್ತು. ಅಕ್ಕ ಪಕ್ಕದ ಹೊಲಗಳಿಗೆ ಹೋಲಿಸಿದರೆ ಇದು ಸ್ವಲ್ಪ ಪರವಾಗಿಲ್ಲ ಅನಿಸಿತು.. ಹೀಗೆ ಅಲ್ಲೇ ಸ್ವಲ್ಪ ಸಮಯ ಕಳೆದು ಮನೆ ಕಡೆಗೆ ದಾರಿ ಹಿಡಿದೇವು..


ಬಸವರಾಜ ಭೂತಿ, ಶಿಕ್ಷಕರು

ಸಿಂದಗಿ

  


School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...