Saturday, November 19, 2022

ಚಳಿ ಕಚಚುಳಿ


ಆಗಾಗ ವಿಹಾರಕ್ಕಾಗಿ ಹೋಗುತಿದ್ದ ನನ್ನಗೆ ಇತ್ತಿತ್ತಲಾಗಿ ಚಳಿಯ ಕಚಗುಳಿಯಿಂದಾಗಿ ಮೇಲೇಳಲು ಮನಸಾಗುತ್ತಿಲ್ಲ. ಚಳಿಯಿಂದ ದೇಹ ರಕ್ಷಣೆಗಾಗಿ ಸ್ವೆಟರ್‌ ಸ್ಕಾರ್ಪ್ ಮೊರೆ ಹೊಗಿ ಬೆಚ್ಚನೆ ಹೊದ್ದು ಮಲಗಿದರೆ ಬೆಳಿಗ್ಗೆ ಎಳೋದು ಎಂಟು ಗಂಟೆ. ನೆಪಕ್ಕೆ ಮಾತ್ರ 5:30 ಅಲಾರಾಂ. ಅಲಾರಾಂ ಹೋಗಿದಾಗ ಎದ್ದೇಳದಷ್ಟು ಬೇಸರ. ಇಂದು ಗಟ್ಟಿ ಮನಸು ಎದ್ದು ವಿಹಾರಕ್ಕೆ ಹೊರಟು ನಿಂತೆ. 


ಕೊರೆವ ಚುಮು ಚುಮು ಚಳಿ ಮೈಗೆ ಕಚಗುಳಿ ನೀಡುತಿತ್ತು. ತಂಗಾಳಿಗೆ ತುಗುತ್ತಾ ಬೇಸತ್ತು ನಿಂತ ಮರಗಳಿಗೆ ಟೊಳಲಿನ ಸಂದುಗಳಿಂದ ಇಣುಕುತ್ತ ಸೂರ್ಯ ಮರುಜೀವ ಬಂದಿತ್ತು. ಮುಳ್ಳಿನ ಕಂಠಿಗೆ ನೇಯ್ದ ಜೇಡರ ಬಲೆಗೆ ಇಬ್ಬನಿ ಮುತ್ತು ತೊಡಸಿ  ಮಿರಮಿರ ಮಿರಗುತಿತ್ತು. 

ಕವಿದ ಮೊಬ್ಬು ಮಂಜು ರಾಶಿ ಸೂರ್ಯನ ಶಾಖಕ್ಕೆ ಮೆಲ್ಲಗೆ ಕರಗುತ್ತಿತ್ತು. ನಾಲೆಯಲ್ಲಿ ಜುಳು ಜುಳು ಹರಿಯುವ ನೀರು ಹೊಂಬಣ್ಣ ಚೆಲ್ಲಿತ್ತು. ಈ  ಪ್ರಕೃತಿಯ ಸೌಂದರ್ಯ ಸವಿಯಲು ನನ್ನ ಮೊಬೈಲ್ ಹಾತೊರೆಯುತ್ತಿತ್ತು.

------------------------------------------------------

▪️ ಬಸವರಾಜ ಭೂತಿ, ಶಿಕ್ಷಕರು 

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ

ಬೇವಿನಹಳ್ಳಿ ಕ್ರಾಸ್, ಶಹಾಪುರ




Monday, November 14, 2022

ಇಂದು ನನ್ನ ಜನ್ಮ ದಿನ..


 ಇಂದು ನನ್ನ ಜನ್ಮ ದಿನ..

ಮುಖಪುಟಕ್ಕೆ (ಪೇಸ್ಬುಕ್) ಬರುವುದಕ್ಕಿಂತ ಮುಂಚೆ ನನಗೂ ಒಂದು ಜನ್ಮ ದಿನವಿರುವದೆ ಅರಿವಿರಲಿಲ್ಲ. ಅದು ಇದ್ದರು ಶಾಲಾ ಪ್ರಮಾಣ ಪತ್ರಗಳಲ್ಲಿ ಮಾತ್ರ ಸೀಮಿತವಾಗಿತ್ತು. ಜನ್ಮದಿನದ ಬಗ್ಗೆ ನಮ್ಮನೆಯಲ್ಲಿ ಗೊತ್ತು ಇರಲಿಲ್ಲ. ಅದನೆಂದು ಆಚರಣೆಯು ಮಾಡಿಲ್ಲ. ಆದರೆ ಇಂದು ಎಷ್ಟೋ ಜನ ಸ್ನೇಹಿತರು ಮುಖಪುಟದಲ್ಲಿ. ವಾಟ್ಸಾಪ್ ಗಳಲಿ ನನಗೆ ಜನ್ಮ ದಿನದ ಶುಭಾಶಯಗಳ ಸುರಿಮಳೆ ಗಯ್ಯುತ್ತಿದ್ದಾರೆ. ಕೆಲ ಆತ್ಮೀಯರು ಶುಭ ನುಡಿಗಳೊಂದಿಗೆ ನನ್ನ ಭಾವಚಿತ್ರಗಳನ್ನು ತಮ್ಮ ವಾಟ್ಸಪ್ ಅಂತಸ್ತಿಗೂ ಹಾಕಿ, ಶುಭ ಕೋರುತ್ತಿದ್ದಾರೆ. ಇದು ನೋಡಿ ನನಗೂ ಏನೋ ಒಂಥರಾ ಖುಷಿ, ಏನೋ ಒಂಥರಾ ಸಂತೋಷ, ಅಷ್ಟೇ ಮನಸ್ಸಿಗೆ ಮುಜುಗರ ಕೂಡಾ. 

ಜನ್ಮ ರಹಸ್ಯ ತಿಳಿಯಲು ನಾನು ಒಂದು ಸಲ ಅವ್ವನ ಬಳಿ ಹೋಗಿ ಪ್ರಯತ್ನ ಮಾಡಿದೆ... "ಯವ್ವ ನಾ ಯಾವಾಗ ಹುಟ್ಟಿನಿ ಬೆ? ನಾ ಹುಟ್ಟಿದಾಗ ನೀವ್ ಒಂದ ಚಿಟ್ಯಾಗ್ ಬರ್ದದಿಟ್ಟಿಲ್ಲೆನು ಅಂದೆ" ... ಅದಕ್ಕವಳು "ಇವಾಗಿನವರಂಗ ಆಗ ನಾವೆಲ್ಲಿ ಸ್ಯಾಣ್ಯಾರು ಇದ್ದೆವಪ್ಪ... ನಿಮ್ಮಷ್ಟು ಸ್ಯಾಣ್ಯಾತನ ಆಗ ನಮಗೆಲ್ಲಿ ಇತ್ತು",.. ನೀವ್ ಬರದಿಟ್ಟಿದ್ರ ನನ್ನ ಜನ್ಮದಿನ ಆಚರಿಸಲಕ್ಕ ಚಲೋ ಇರ್ತಿತ್ ನೋಡು ಅಂದೆ... 


"ಕಣ್ಣಿದ್ದು ಕುರ್ಡರಪ್ಪ ಆಗ ನಾವು. ಇಗಿನ ಹೆಂಗಸರು ಬಾಳ್  ಸಾಲಿ ಕಲ್ತಿರತಾರ, ಮಕ್ಳ ಹುಟ್ಟಾನ ದಿನಾ, ಟೈಮ್ ತಿಥಿ ನಕ್ಷತ್ರ  ಬರ್ದಿಡ್ತಾರ. ವರ್ಷಗೊಮ್ಮಿ ತಿಂಗಳಿಗೊಮ್ಮಿ ಬಡ್ಡ್ಯಾ ಮಾಡ್ತಾರ...  ಆಗ ಇದೆಲ್ಲ ನಮಗೆಲ್ಲಿ ಗೊತ್ತಿತ್ತು ಇಂಥ ಆಚರಣಿ. ಬಾಳಾದ್ರ ಅಮಾಸಿ, ಹುಣ್ಣಿಮಿ ಸುತ್ತಾ ಮುತ್ತಾ ಹುಟ್ಟಿದರ್ ತೆಲಿ ಎರ್ಕೊಡು ಗುಡಿಗಿ ಹೋಗಿ ಬರುತ್ತಿದ್ದರು" ಎಂದ್ರು.

 "ನಿನ್ನ ಹಡಿದಿವಸ ಚಂತಾನ ಭಾವಿ ಹೊತ್ತ ಸಂಜಿಕಡಿ  ಮನಿಗೆ ಬಂದಾಗ ನಮ್ ತವ್ರಮನಿಯವರು ಕುಬಸಾ ಮಾಡಾಕ ಊರಿಂದ ಬಂದಿದ್ದರು, ಅವತ್ತೆ ನನಗ ಬ್ಯಾನಿ ಸರಕಾರ ದವಾಖಾನ್ಯಾಗ ನಿನ್ನ ಹಡದಿನಿ" ಅಂದ್ಳು ನಮ್ಮವ್ವ. 

 ನಾನು ಕುತುಹಲದಿಂದ " ಹೌದಾ..! ಮತ್ ಕುಬ್ಸಾ ಹ್ಯಾಂಗ್ ಮಾಡಿದ್ರಿ ಬೆ" ಅಂದೆ...

 "ಬಂದ ಮಂದಿ ಹಂಗ್ಯಾ ಹೊಗ್ಬಾರದಂತ ನಿಮ್ ಮುತ್ಯಾ ಅವತ್ತ  ಎನು ತಿಳಿಲಾರ್ದ ಸಣ್ಣ್ ಹುಡ್ಗಿಗಿ  ಅವ್ರ ಅತ್ತಿ ಮಗ್ಳಿಗಿ  ನಿಮ್ಮಪ್ಪನ ಜೊತಿ ಕುಂಡ್ರಸಿ ಕುಬಸಾ ಮಾಡ್ಯಾರ". ಅಂದ್ಳು, ಅವ್ಳ ಆ ಮುಗ್ದತೆ ಕಂಡು ನಗು ಬಂತು. ಮತ್ತೆ ಕುತುಹಲದಿಂದ ಕೆಳುತ್ತಾ ನಡೆದೆ.... 

"ಚೊಛ್ಛಲ ಮಗ ನೀಯೊಬ್ಬ, ಮತ್ತ ಏಳ ತಿಂಗಳಿಗಿ ಹುಟ್ಟದವ ನಿಮ್ ತಮ್ಮೋಬ್ಬ ಯೇನು ತರಾಸ ಮಾಡದೆ ಹುಟ್ಟದವರು ಅಂದ್ರ.. ಒಟ್ಟ್ ಒಂಬತ್ತ್ ಮಕ್ಳನ ಹಡದಿನಿ, ಒಂದು ಬದುಕಲಿಲ್ಲ. ಅವೆಲ್ಲ ಹೊಟ್ಟ್ಯಾಗ ಸತ್ತ ಹುಟ್ಟತಿದ್ವು, ದವಾಖಾನ್ಯಾಗ ಸಿಕ್ಕಂಗ ಹೊಟ್ಟಿ ಹಿಚಕ್ಯಾಡಿ ಅವು ತಗದಾರ" ಅಂದಾಗ ಮನಸಿಗೆ ಏನೋ ಒಂಥರಾ ಕಸಿವಿಸಿ ಯಾಗಿ ಕಣ್ಣಲ್ಲಿ ನೀರ ಬಂತು ಅದರು ತೊರಗೊಡದೆ.

ಮತ್ತೆ ನಕ್ಕೋತಾ "ಇರಲಿ ಬಿಡು ಬೆ... ಇಗಿನವರು ಅಗಿದ್ದರ ಸತ್ತೆ ಹೊಗ್ತಿದ್ದರು ನಿಮ್ಮದು ಗಟ್ಟಿ ಜೀವ್ ಅದ್ಕ ಬದುಕಿರಿ".. ಅಂದೆ

 "ಮಗ ನೀ ಹುಟ್ಟಿದಾಗ ದೀವಳ್ಗಿ ಅಮಾಸಿ ಸಮೀಪ ಇತ್ತು. ಆಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟ್ಯಾನ ಅವ್ರೆನರ ಬರ್ದಿಟ್ಟಿರ ಬೇಕು ಅವರ್ನ ಕೆಳಿದರ ಗೊತ್ತಾಗತಾದ" ಅಂದ್ಳು.  


ಅಮಾವಾಸಿ, ಹುಣ್ಣಿಮಿ ಲೆಕ್ಕ ಹಾಕಿ ದಿನಗಳ ಅಳೆಯೊ ಕಾಲದಾಗ ಹುಟ್ಟಿದವ ನಾನು ಪಾಪ ಅವ್ರರೆ ಎಲ್ಲಿಂದ ಬರ್ದಿಟ್ಟಾರು ನನ್ನ ಜನ್ಮ ದಿನವನ್ನ.  ಶಾಲಾ ಹೆಡ್ ಮಾಸ್ಟರ್  ಕೃಪೆಯಿಂದ ನನಗೂ ಒಂದು ಜನ್ಮದಿನ ಸಿಕ್ತು ಇಂಗ್ಲಿಷ್ ಕ್ಯಾಲೆಂಡರ  ಪ್ರಕಾರ ಹಾಗೂ ಶಾಲಾ ದಾಖಜಲಾತಿ ಪ್ರಕಾರ ಇಂದು ನನ್ನ ಜನ್ಮದಿನ ನವಂಬರ್ ತಿಂಗಳಲ್ಲಿ ಆಚರಿಸಿಕೊಳ್ಳುತ್ತಿದ್ದೇನೆ. ಅವ್ವ ಹೇಳುವ ಪ್ರಕಾರ ದಿವಳಗಿ ಸುತ್ತಾಮುತ್ತಾ ಅಂದರೆ. ನವೆಂಬರ್ ಡಿಸೆಂಬರ್ ತಿಂಗಳು ಆಗಿರಬಹುದು.

 ಕೈ ತಿರುವಿ ಜೊಗ್ಗಿ ಹಚ್ಚಿದದ್ರು ಕಿವಿಗೆ ಬಾರದ ವಯಸ್ಸಿನ್ಯಾಗ ನಮ್ಮ  ಚಿಕ್ಕಪ್ಪ(ಕಾಕಾ)ರ ಜೊತಿ ನನಗೂ ಶಾಲೆಗೆ ಹೆಸರ ನಮ್ಮ ಮುತ್ಯಾ ಹಚ್ಚಿ ಬಂದಿದ್ದ ಅನಿಸುತ್ತೆ. ಆದರೆ ನನಗೆ ತಿಳುವಳಿಕೆ ಬಂದು ನಮ್ಮ ಚಿಕ್ಕಪ್ಪರ ಜೊತೆ ಶಾಲೆಗೆ ಹೊಗಿ ಕ್ಲಾಸಿನ್ಯಾಗ  ಕುಂತಾಗ ನಮ್ಮ ಸರ್ ಒಬ್ಬರು ಹೆಸರು ಕೂಗಿದಾಗಲೇ ಗೊತ್ತಾಗಿದ್ದು,  ಈಗ ನಾನು ನಾಲ್ಕನೇ ತರಗತಿಗೆ ಬಂದಿದ್ದಿನಿ ಅಂತ.

ಅವರೇ ನಾನಗೊಂದು ಜನ್ಮದಿನವನ್ನ ನೀಡಿದ್ದರು. ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ನಮೂದಾಯಿತು. ಅದೇ ನನ್ನ ಜನ್ಮ ದಿನವಾಗಿ ಇಂದು ಆಚರಣೆಯು ನಡೆಯಿತು... ನನ್ನ ಮಡದಿ ಪ್ರತಿ ವರ್ಷ ಈ ದಿನದಂದು ನನಗಾಗಿ ಉಡುಗೊರೆಯು ಸಹ ಕೊಡಿಸ ತೊಡಗಿದಳು. ಆತ್ಮೀಯ ಸ್ನೇಹಿತರು ಪಾರ್ಟಿ ಅದು ಇದು ಅಂತ ಖರ್ಚು ಮಾಡಿಸಿದ್ದು ಆಗಿದೆ. ನಾನು ಕೂಡ ಹರಿಸಿ ಹಾರೈಸಿದವರಿಗೆ ಧನ್ಯವಾದಗಳು ತಿಳಿಸಿ ಖುಷಿ ಪಡ್ತಾ ಇದ್ದೀನಿ.

ಶ್ರೀ ಬಸವರಾಜ  ಭೂತಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು


Wednesday, October 12, 2022

ತಿರುಪತಿ ವೆಲ್ಲೂರು ಕಂಚಿಪುರಂ ದರ್ಶನ


ಪೂರ್ವ ನಿಯೋಜನೆಯಂತೆ 07-10-2022 ರಂದು ಬೆಳಗ್ಗೆ 11:0೦ ಗಂಟೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಗದಗದಿಂದ ರೇಣುಗುಂಟಕ್ಕೆ ಹೊರಡು ರೈಲು ಹಿಡಿಯಲು ಸಿಂದಗಿಯಿಂದ ಹೋಟೇವು ವಿಜಯಪೂರದಿಂದ 2:30 ರ ಸೋಲಾಪೂರ-ಗದಗ ಪ್ಯಾಸೆಂಜರ್ ರೈಲು ಹತ್ತಿದ ನಾವು ಸರಿಯಾದ ಸಮಯಕ್ಕೆ ಗದಗ ಮುಟ್ಟುವದೋ ಇಲ್ಲವೊ ಅನ್ನೋ ಆತಂಕದಲ್ಲಿಯೆ ಗದಗ ತಲುಪಿದೆವು

ಹುಬ್ಬಳ್ಳಿಯಿಂದ ಬರುವ ಚೆನೈ ಎಕ್ಸ್‌ಪ್ರೆಸ್‌ ರೈಲು ಗದಗ ಬರಲು ಇನ್ನೂ ಸಮಯ ಇತ್ತು ಅಲ್ಲಿವರೆಗೂ ಪಂಡಿತ್ ಪುಟ್ಟರಾಜ ಗವಾಯಿ ಅಜ್ಜರ್ ಮಠಕ್ಕೆ ಹೋಗಿ  ಬರಲು ನಿರ್ಧರಿಸಿ  ಆಟೋ ಹಿಡಿದು ಹೊರಟಿವು. ದರ್ಶನದ ನಂತರ  ಪ್ರಸಾದ ಸ್ವೀಕರಿಸಿ ನಿಲ್ದಾಣಕ್ಕೆ ಬಂದೇವು ಸ್ವಲ್ಪ ಹೊತ್ತಲ್ಲೇ   ಚೆನೈ ಎಕ್ಸ್‌ಪ್ರೆಸ್‌ ರೈಲು ಬಂದೆ ಬಿಟ್ಟಿತು. ಹೆಣ ಬಾರ ಲಗೇಜುಗಳನ್ನ ಹೊತ್ತುಕೊಂಡು ಹರಸಾಹಾಸ ಮಾಡುತ್ತಾ ಮುಂಗಡ ಕಾದಿರಿಸಿದ್ದ ಶಯನಯಾನ ಸೀಟುಗಳ ಮೇಲೆ ಕುಳಿತು, ಎಲ್ಲವೂ ಒಂದು ಸಲ ಪರೀಕ್ಷಿಸಿ ನಿಟ್ಟುಸಿರು ಬಿಟ್ಟೆ. 

ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಹೊರಟ ನಮ್ಮ ರೈಲು ಕಣ್ಣು ಬಿಟ್ಟಾಗ ಕರ್ನಾಟಕ ಸೀಮೆ ದಾಟಿ ಆಂದ್ರದ ಕಡಪದಲ್ಲಿತ್ತು. ಆಗಲೇ ಬೆಳಗಾಗಿದ್ದರಿಂದ ಎದ್ದು ಹಲ್ಲುಜ್ಜಿ ಪ್ರಕೃತಿ ಸೌಂದರ್ಯ ಸವಿಯಲು ಕಿಡಕಿ ಕಡೆಗೆ ಅಂಟಿಕೋಡು ಕುಳಿತೆ. ಮಲೆನಾಡಿನ ಸೌಂದರ್ಯ ಕಣ್ ಮನ ತಣಿಸುತ್ತಾ ರೈಲು ಹೊರಟಿತು.

ರೇಣುಕುಂಟಾಗ ಸಮಯ 7.30 ಗಂಟೆ ಆಗಿತ್ತು. ಸಾಮಾನುಗಳು ಮಕ್ಕಳುನ್ನು ಕೆಳಗಿಳಿಸಿ ಇಳಿದು ಹೊರ ಬರುವಷ್ಟರಲ್ಲಿ ಅಟೋ ಟ್ಯಾಕ್ಸಿ ಡ್ರೈವರ್ ಗಳು ಅಹಾರ ಕಂಡಾಗ ಮುಗಿಬಿಳೊ ಹದ್ದುಗಳಂತೆ  ಒಂದಕ್ಕೆ ನಾಲ್ಕು ಪಟ್ಟು ಬಾಡಿಗೆ ಹೆಳುತ್ತಾ ನಮ್ಮನ್ನು ಸುತ್ತುವರಿದರು ಬಿಟ್ಟರು. ತಪ್ಪಿಸಿಕೊಂಡು ಮತ್ತಂದು ಟ್ಯಾಕ್ಸಿ ಹುಡುಕೋಣ ಅದ್ರು ಅಲ್ಲಿಗೂ ಬಂದು ವ್ಯವಹಾರ ಕಲ್ಲು ಹಾಕುತಿದ್ರು ಅವರ ಭಾಷೆ ನಮಗೆ ಬರತಾಯಿಲ್ಲ, ಅವರ ಭಾಷೆ ನಮಗೆ ತಿಲಿತಾಲಿಲ್ಲ.. ಅವರು ಕೇಳಿದಷ್ಟು ದುಡ್ಡು ಕೊಡಲು ಮನಸ್ಸು ಒಪ್ಪುತ್ತಾಯಿಲ್ಲ... ಹಾಗೋ ಹೀಗೂ ಮಾಡಿ ಟ್ಯಾಕ್ಸಿ ಮುಗಿಸಿಕೊಂಡು ರೇಣುಗುಂಟದಿಂದ ತಿರುಪತಿ ತಿರುಮಲಕ್ಕೆ ಹೊರಟೆವು. 

ತಿರುಮಲಕ್ಕೆ ಬಂದಾಗ ಸಮಯ ಸುಮಾರು 10.30 ಗಂಟೆ ಆಗಿತ್ತು. ಅಲ್ಲಿಯೇ ಒಂದು ಛತ್ರದಲ್ಲಿ ಲಾಕರ್ ಪಡೆದುಕೊಂಡು ಸಾಮಾನುಗಳನ್ನು ಹೊದಿಸಿಟ್ಟು ನಿತ್ಯ ಕ್ರಮಗಳನ್ನು ಮುಗಿಸಿ ಹೊರಗೆ ಬಂದು ಲಘು ಉಪಹಾರ ಸೇವಿಸಿ. ದರ್ಶನಕ್ಕೆ ಪಾಳಿ ಹಚ್ಚಲು ಹೊರಟೆವು. ಅಷ್ಟರಲ್ಲಿ ನಮ್ಮ ಅದೃಷ್ಟಕ್ಕೆ ಒಬ್ಬ  ಸ್ವಾಮಿ ಸೇವೆ ಮಾಡಲು ಬಂದ ಸ್ವಯಂಸೇವಕರು ಸಿಕ್ಕು ಮಾರ್ಗದರ್ಶನ ಮಾಡಿದರು. 


ದರ್ಶನದ ಸಮಯ 48 ಗಂಟೆಗಳು ಕಾಲ ಎಂದು ಅವರಿಂದ ತಿಳಿದು ಇನ್ನೇನು ಮಾಡುವುದು ಎಂದು ಗತಿ ಇಲ್ಲದೆ ಯೋಚಿಸುವಾಗ.ಅವರೇ ಒಂದು ಉಪಾಯ ತಿಳಿಸಿದರು. ಮಕ್ಕಳು ಕರೆದುಕೊಂಡು ಈಗ ಹೊಗುವದು ಸರಿಯಲ್ಲ, ಬೆಳಗಿನ ಜಾವ ಪಾಳಿಗೆ ನಿಂತ್ರೆ ಒಳ್ಳೆಯದು ಎಂದರು.  ಅವರು ಹೇಳ್ದಂತೆ ನಾವು ಕೂಡ ಸರಿ ಎಂದೆವು. ನಾಲ್ಕು ಗಂಟೆಯವರೆಗೂ ಇಲ್ಲೇ ಸುತ್ತಾಡಿ 5:00 ಗಂಟೆಗೆ ಸಹಸ್ರ ದೀಪಾಲಂಕಾರ, ನೋಡಲು ಚೆನ್ನಾಗಿರುತ್ತೆ ನಾಲ್ಕು ಗಂಟೆಗೆ ಬನ್ನಿ ನಾನು ಬರುತ್ತೇನೆ ಎಂದರು.  ಅದರಂತೆ 4:00 ಗಂಟೆಗೆ ಅವರನ್ನು ಕರೆದು ಕೊಂಡು ಹೊರೆಟೆವು. 

ನಮ್ಮ ಜೊತೆ ಬಂದ ಆ ವ್ಯಕ್ತಿ ನಾವೆಂದು ನೋಡಲಾಗದ ದೇವಾಲಯ ಒಳಹೊರ ಸೌಂದರ್ಯ ತುಂಬಾ ಹತ್ತಿರದಿಂದ ಮಾಹಿತಿ ನೀಡಿದರು. ದೇವಾಲಯದ ಆಡಳಿತ ಮಂಡಳಿಯಿಂದ ಪರ್ಮಿಷನ್ ಪಡೆದುಕೊಂಡು ಕೆಲ ದಿನಗಳ ಕಾಲ ಸ್ವಯಂ ಸೇವಕರಾಗಿ  ಅವರು ಬಂದಿದ್ದರಿಂದ. ದೇವರ ದರ್ಶನ ಒಂದು ಬಿಟ್ಟು ಇಡೀ ದೇವಸ್ಥಾನ ಸುತ್ತಲು ನಮಗೆ ಯಾವುದೇ ಅಡ್ಡಿ ಆತಂಕಗಳಾಗಲಿಲ್ಲ.

 

ಇಷ್ಟೊಂದು ಹತ್ತಿರದಿಂದ ತಿರುಪತಿ ತಿರುಮಲ ದರ್ಶನ ಮಾಡಲು ನಮ್ಮಿಂದ ಆಗ್ತಾನು ಇರಲಿಲ್ಲ ಇಡೀ ದೇವಸ್ಥಾನದ ವಿಶೇಷತೆಗಳನ್ನು ಸವಿಸ್ತಾರವಾಗಿ ತಿಳಿಸಿ, ಸಹಸ್ರ ದೀಪಾಲಂಕಾರ ಹಾಗೂ ಗರುಡ ಸೇವೆಯ ಮೆರವಣಿಗೆ ತುಂಬಾ ಹತ್ತಿರದಿಂದ ತೋರಿಸಿದರು. ತೃಪ್ತಿಯಾಗುವವರೆಗೂ ನೋಡಿ ಪುಳಕಿತರಾದೆವು. ನಮ್ಮೆಲ್ಲರಿಗೂ ಅನ್ನ ಪ್ರಸಾದ ಮಾಡಿಸಿ ಸೇವಾ ಸದನದ ಬಳಿ ಬಿಟ್ಟು ಹೋದರು. 

ಮತ್ತೆ ನಮ್ಮ ಛತ್ರಕ್ಕೆ ಹೋದರೆ ಬೇಗ ಎದ್ದು ಬರಲು ಅಗೊಲ್ಲವೆಂದು ತಿಳಿದು ಅಲ್ಲಿಯೆ ಹತ್ತಿರದ ಚೌಟ್ರಿಯಲ್ಲೆ ಮಲಗಿ ರಾತ್ರಿ 2 ಗಂಟೆಗೆ ಎದ್ದು ದರ್ಶನಕ್ಕೆ ಪಾಳಿ ಹಚ್ಚಲು ತೆರಳಿದೆವು. ಅದೇ ಸಮಯಕ್ಕೆ ಸರಿಯಾಗಿ ಪಾಳಿ ನಿಲ್ಲಲು ಜನಸಾಗರವೇ ಹರಿದು ಬರುತ್ತಿತ್ತು.

ಸುಮಾರು ಐದಾರು ಕಿಲೋಮೀಟರ್ ಉದ್ದದ ಪಾಳಿಯನ್ನು 12 ತಾಸುಗಳ ಕಾಲ ಕ್ರಮಿಸಿ ಆದ ಮೇಲೆ, ದೇವಸ್ಥಾನದ ಹತ್ತಿರದ ಒಂದು ಚೌಟ್ರಿಯಲ್ಲಿ ದರ್ಶನ ಸಮಯದ ಒಂದು ರಸೀದಿ ನೀಡಿ ಆರು ತಾಸುಗಳ ಕಾಲ ಕೂಡಿ ಹಾಕಿದರು. 16 ತಾಸುಗಳ ನಂತರ ರಾತ್ರಿ 9:00 ಗಂಟೆಗೆ ಸಪ್ತಗಿರಿವಾಸ ಶ್ರೀ ತಿರುಮಲೇಶನ ದರ್ಶನ ಭಾಗ್ಯ ಪಡೆದು ಪುನೀತರಾದೆವು.


ಹೊರಬಂದು ದೇವಸ್ಥಾನ ಎದುರುಗಡೆ ನಿಂತುಕೊಂಡು ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡು. ದೇವಸ್ಥಾನದ ಎಡ ಬಲದ ಬಾಜಾರ ಬೀದಿಯಲ್ಲಿ ವ್ಯಾಪಾರ ಮಾಡುತ್ತಾ ಲಾಕರ್ ರೂಮಗೆ ಬಂದೆವು. ಒಂದು ಛತ್ರದಲ್ಲಿ ಇದ್ದು ಕಣ್ತುಂಬ ನಿದ್ದೆ ಮಾಡಿ. ಬೆಳಗ್ಗೆ ಮುಂದಿನ ಯೋಜನೆಗಳನ್ನು ಹಾಕಿದೆವು.


ಮುಂಗಡ ಕಾಯ್ದಿರಿಸಿದ ಲೋಕಮಾನ್ಯ ತಿಲಕ್ ಚೆನ್ನೈ ಮುಂಬೈ ಎಕ್ಸ್ಪ್ರೆಸ್  ರೈಲು ಬರಲು ಇನ್ನೆರಡು ದಿನ ಬಾಕಿ ಇತ್ತು. ಸಾಕಷ್ಟು ಸಮಯ ಇದ್ದ ಕಾರಣ  ಮಾರನೇದಿನ ಎಲ್ಲಿಗೆ ತಿರುಗಾಟ ಎಂಬ ವಿಷಯ ಚರ್ಚೆಗೆ ಬಂದಾಗ ವೆಲ್ಲೂರು ಮತ್ತು ಕಂಚಿಗೆ ಹೊಗುವದಾಗಿ ಸ್ನೇಹಿತ ಶಿವಾನಂದ ಸೂಚಿಸಿದಾಗ ಎಲ್ಲರೂ ಸಮ್ಮತಿಸಿದೆವು. 

ಕೂಡಲೆ ಟ್ಯಾಕ್ಸಿ ಹಿಡಿದು ತಿರುಮಲ ದೇವಸ್ಥಾನದಿಂದ 25 ಕಿ.ಮೀ ದೂರದಲ್ಲಿ  ಶೇಷಾದ್ರಿ ಬೆಟ್ಟಗಳ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇವಾಲಯದ ಒಳಗೆ ಇರುವ ಪ್ರಸಿದ್ಧ ಜಲಪಾತ ನೋಡಲು ತೆರಳಿದೆವು.


ತಿರುಪತಿಯ ಸುತ್ತಮುತ್ತಲಿನ ಏಕೈಕ ಶಿವ ದೇವಾಲಯ ಕಪಿಲಾ ತೀರ್ಥಂ ದೇವಾಲಯ. ತಿರುಮಲ ಬೆಟ್ಟಗಳ ಮೇಲಿನ 108 ಪವಿತ್ರ ತೀರ್ಥಗಳಲ್ಲಿ ಇದು ಒಂದಂತೆ. ಇಲ್ಲಿರುವ ಶಿವಲಿಂಗವನ್ನು ಹಿತ್ತಾಳೆಯಿಂದ ಮಾಡಲಾಗಿದೆ. ಕುಳಿತಿರುವ ನಂದಿಯ ಬೃಹತ್ ಕಲ್ಲಿನ ಪ್ರತಿಮೆ, ದೇವಾಲಯದ ಪ್ರವೇಶದ್ವಾರದಲ್ಲಿ ಭಕ್ತರನ್ನು ಸ್ವಾಗತಿಸುತ್ತದೆ. ಇಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಭಕ್ತರ ಎಲ್ಲಾ ಪಾಪಗಳು ದೂರವಾಗುತ್ತದೆ ಎಂಬ ಪ್ರತೀತಿ ಇದೆ..  ಬೆಟ್ಟದಿಂದ ಇಳಿದು ರಬಸದಿ ಬೀಳುವ ಜಲಧಾರೆಯಲ್ಲಿ ಮಕ್ಕಳು ಮಿಂದೆದ್ದು ಖುಷಿಪಟ್ಟರು.

ಅಲ್ಲಿಂದ ತಿರುಪತಿಯ ಬಸ್ ನಿಲ್ದಾಣಕ್ಕೆ ಬಂದಿಳಿದು ವೆಲ್ಲೂರು ಕಡೆಗೆ ಎಪಿಆರಟಿಸಿ ಬಸಲ್ಲಿ ಪ್ರಯಾಣ ಬೆಳೆಸಿದೆವು. ಸುಮಾರು 110 ಕಿ.ಮೀ. ದೂರದಲ್ಲಿರುವ ವೆಲ್ಲೂರು   ಗುಡ್ಡ ಬೆಟ್ಟ ನಡುವೆ ವಿಶಾಲ  ರಾಷ್ಟ್ರೀಯ ಹೆದ್ದಾರಿ ಮೇಲೆ ಹಾದು ಹೋಗುವಾಗ ಮೂರು ತಾಸಿನ ಹಾದಿ ಸವೆದಿದ್ದು ಗೊತ್ತೇ ಆಗುವುದಿಲ್ಲ.
ಎಲ್ಲಾ ಕಡೆಗೂ ಹೆಚ್ಚಾಗಿ ಪ್ರವಾಸ ಕೈಕೊಂಡಿದ್ದೆ. ಆದರೆ ಆಂಧ್ರ ತಮಿಳನಾಡು ಕೇರಳದ  ಕೆಲವು ಪ್ರವಾಸಿ ತಾಣಗಳು ನನಗೆ ಮರೀಚಿಕೆಯಾಗಿದ್ದವು. ಎಂದಾದರೂ ಹೋಗಿ ಬರಬೇಕೆನ್ನುವ ಇಂಗಿತ ಮನದಲ್ಲಿತ್ತು. ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಕಂಚಿ ಕಾಮಾಕ್ಷಿ ಹಾಗೂ ವೆಲ್ಲೂರಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದೆ ಬಿಟ್ಟೆವು.  
ವೆಲ್ಲೂರಿನ ಸುವರ್ಣ ಮಂದಿರ ನೋಡಲು ಅನನ್ಯ ಅನರ್ಗ್ಯ ಹೊರಭಾಗಕ್ಕೆ ಸ್ವರ್ಣವನ್ನು ಲೇಪಿಸಿ ನಿರ್ಮಿಸಲಾದ ಈ ದೇವಸ್ಥಾನದ ನೋಡಲು ನಿಜಕ್ಕೂ ಸ್ವರ್ಗ ಅದರ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ... 
ಉಚಿತ ದರ್ಶನ ಸಾಯಂಕಾಲ 7:30ಕ್ಕೆ ಇರುವ ಕಾರಣ ಮುಂದೆ ಹೋಗಲು ತಡವಾಗಬಾರದೆಂದು ನೂರು ರೂಪಾಯಿ ರಶೀದಿ ಪಡೆದು ನಕ್ಷತ್ರಾಕಾರದ ರಸ್ತೆಯಲ್ಲಿ ಪ್ರದಕ್ಷಿಣೆ ಹಾಕುತ್ತಾ ಒಳ ಬರುವಾಗ ಹಳೆ ಪೌರಾಣಿಕ ಸಿನಿಮಾಗಳಲ್ಲಿ ಬರುವ ದೇವಾನು ದೇವತೆಗಳಿರುವ ಸ್ವರ್ಗ ಲೋಕದಂತೆ ಬಾಸವಾದ ಅನುಭವ. 

ಅಂದಾಜು 100 ಎಕರೆಗಿಂತಲು ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಅಚ್ಚಸಿರು ಉದ್ಯಾನವನ. ನಕ್ಷತ್ರಾಕಾರದ ದಾರಿ ಹಿಡಿದು ಒಳಹೊಕ್ಕಾಗ ಮೊದಲಿಗೆ ಎದುರಾಗುವುದೇ 1700 ಕೆಜಿ ಬೆಳ್ಳಿ ಗಣಪ. ದಾರಿ ಮದ್ಯ ಅಲ್ಲಲ್ಲಿ ಹಲವು ಭಾಷೆಗಳಲ್ಲಿ ಬರೆದ ಜೀವನ ತಾತ್ವಿಕ ಸಂದೇಶಗಳು, ಸುತ್ತಲೂ ಜಿನುಗುವ ಕಾರಂಜಿಗಳು, ಅಲ್ಲೊಂದು ಇಲ್ಲೊಂದು ಶಿಲಾಬಾಲಿಕೆಯರ ಕಲಾಕೃತಿಗಳು, ಶಿಲಾ ಮಂಟಪಗಳು, ಇವೆಲ್ಲವನ್ನೂ ನೋಡಲು ಕಣ್ಣೆರಡು ಸಾಲಾದು.
ಪ್ರಧಾನ ಗರ್ಭಗುಡಿಯ ಮುಂಭಾಗದಲ್ಲಿರುವ ಮಹಾಲಕ್ಷ್ಮೀಯ ಮತ್ತೂಂದು 70 ಕೆಜಿ ಶುದ್ಧ ಚಿನ್ನದ ಮೂರ್ತಿಗೆ ಸ್ವಯಂ ಅಭಿಷೇಕ ಮಾಡುವ ಸೌಭಾಗ್ಯವೂ ನಮ್ಮೆಲ್ಲರಿಗೆ ದೊರೆಯಿತು. 1.8 ಕಿಮೀ ಉದ್ದವನ್ನು  ನಕ್ಷತ್ರಾಕಾರದ ಹಾದಿಯ ಕೊನೆಗೆ ಮತ್ತೊಮ್ಮೆ ಶ್ರೀನಿವಾಸನ ದರ್ಶನ ಭಾಗ್ಯ ದೊರೆಯುವುದು.


ದೇವಾಲಯದಲ್ಲಿ ಸ್ವಲ್ಪ ಉಪಹಾರ ಸೇವಿಸಿ, ವೆಲ್ಲೂರಿನಿಂದ ಸುಮಾರು 72  ಕಿಮೀ ದೂರದಲ್ಲಿರುವ 'ಸಾವಿರ ದೇವಾಲಯಗಳ ಸುವರ್ಣ ನಗರ' ಎಂದೂ ಕರೆಯಲ್ಪಡುವ ತಮಿಳುನಾಡಿನ ಕಾಂಚೀಪುರಂ ಅಥವಾ ಕಂಚಿ ಪ್ರವಾಸಿಗರ ಆಕರ್ಷಣಿಯ ಸ್ಥಾನವಾದ ಭೇಟಿ ನೀಡಿದಾಗ ರಾತ್ರಿ ಸುಮಾರು 10:30 ಗಂಟೆಯಾಗಿತ್ತು. ದೇವಸ್ಥಾನದ ಪಕ್ಕದಲ್ಲಿ ಒಂದು ವಿಶ್ರಾಂತಿ ಗ್ರಹ ಪಡೆದು ಅಲ್ಲಿಯೇ ರಾತ್ರಿ ಕಳೆವು. 
ಬೆಳಗೆದ್ದು ಸಾಕ್ಷಾತ್  ಪಾರ್ವತಿಯ ದೇವಿಯ ಅವತಾರವೆಂದು ನಂಬಿಲಾದ ಕಾಮಾಕ್ಷಿಯನ್ನು ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಪೂಜಿಸಲಾಗುವ ದೇವಿ ದರ್ಶನ ಪಡೆದು ಆ ತಾಯಿ ಕಾಮಾಕ್ಷಿ ದೇವಿಯ ಕೃಪೆಗೆ ಪಾತ್ರರಾದೆವು. ದೇವಾಲಯದ ಹೊರಗಡೆ ಪ್ರಸಾದ ಸ್ವೀಕರಿಸಿ. ಸ್ವಚ್ಛ ಸುಂದರ ದೇವಾಲಯದ ಅಂಗಳದಲ್ಲಿ ತುಂತುರು ಮಳೆ ಮದ್ಯ ಬಂದ ಸವಿ ನೆನಪಿಗಾಗಿ ಒಂದಿಷ್ಟು ಫೋಟೋ ತೆಗೆಸಿಕೊಂಡು ಏಕಾಂಬರೇಶ್ವರ ದೇವಸ್ಥಾನ ಕಡೆಗೆ ಹೆಜ್ಜೆ ಹಾಕಿದೆವು.



ಸರಿಸುಮಾರು 25 ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ಈ ಭವ್ಯವಾದ ದೇವಾಲಯವು ಕಾಂಚೀಪುರಂನ ಅತ್ಯಂತ ದೊಡ್ಡ ದೇವಾಲಯ. ಈ ದೇವಸ್ಥಾನದ ಗೋಪುರವು 59 ಮೀಟರ್ ಎತ್ತರದ ಈ ಗೋಪುರವು ದೇಶದ ಅತಿ ಎತ್ತರವಾದ ಗೋಪುರ ಇದಾಗಿದೆ.  ಈ ದೇವಸ್ಥಾನದ ಸುತ್ತಲೂ 1008 ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.  ಪ್ರತಿ ಅಂಕಣದಲ್ಲಿ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿರುವ 1,000-ಕಂಬಗಳ ಸಭಾಂಗಣ ಇವೆ. ಬಹಳಷ್ಟು ವಿಶೇಷತೆ ಇಂದ ಕೂಡಿದ 3500 ವರ್ಷಗಳಷ್ಟು ಹಳೆಯದಾದ ಮಾವಿನ ಮರ ಇದೆ. ಇನ್ನೂ ಹಲವಾರು ವಿಶೇಷತೆಯಿಂದ ಈ ದೇವಾಲಯ ಕೂಡಿದೆ ಇಷ್ಟು ಇತಿಹಾಸ ಕೆದಕಿದಾಗ ನನಗೆ ಸಿಕ್ಕ ಮಾಹಿತಿ.


ಇವೆರಡು ದೇವಾಲಯಗಳು ನೋಡಿ ಕಣ್ ತುಂಬಿಕೊಳ್ಳುವಷ್ಟರಲ್ಲಿ ಸಮಯ 12 ಗಂಟೆ ಮೇಲಾಗಿತ್ತು. ಇನ್ನು ಸಮಯವಿದ್ದರೂ ಎಲ್ಲಿ ಚೆನ್ನೈ ಇಂದ ಬರುವ ಲೋಕಮಾನ್ಯ ತಿಲಕ ವೀಕ್ಲಿ ಎಕ್ಸ್ಪ್ರೆಸ್ ರೈಲು ಕೈತಪ್ಪುವುದು ಎನ್ನುವ ಆತಂಕದಲ್ಲಿ ನಮ್ಮ ಸ್ನೇಹಿತರು ಈ ಮೂರು ದೇವಾಲಯಗಳನ್ನು ನೋಡಲು ಬಿಡಲಿಲ್ಲ ನಿರಾಶೆಯಲ್ಲಿ ಅರಕೋಣಂ ಜಂಕ್ಷನ್ ಗೆ ಹೆಜ್ಜೆ ಹಾಕಿದೆ.
ಕಂಚಿ ಕೈಲಾಸನಾಥರ್ ದೇವಾಲಯ
ಶ್ರೀ ವರದರಾಜ ಪೆರುಮಾಳ್ ದೇವಸ್ಥಾನ
ತ್ರೈಲೋಕ್ಯನಾಥ ದೇವಾಲಯ
ಈ ಮೂರು ದೇವಾಲಯಗಳು ನೋಡಲಾಗಲಿಲ್ಲ ಅನ್ನುವ ಕೊರಗು ನನ್ನನ್ನು ಕಾಡು ತೊಡಗಿತು. ಅರ್ಕೋಣಂ ಜಂಕ್ಷನ್ ಗೆ ಬಂದು ರೈಲು ಹಿಡಿದು ಬೆಳಗಾಗುವಷ್ಟರಲ್ಲಿ ಊರು ತಲುಪಿದೆವು.
        ■ ಬಸವರಾಜ ಭೂತಿ, ಶಿಕ್ಷಕರು ಸಿಂದಗಿ

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...