Sunday, April 2, 2023

ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ...

           ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ...

ತಂದೆ ತಾಯಿಯರ ಆಶಯದಂತೆ  ಐದನೇ ತರಗತಿಯಲ್ಲಿ ಇರುವಾಗಲೇ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು. ಈ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ತಂದೆ-ತಾಯಿಯರ ವಾತ್ಸಲ್ಯದಲ್ಲಿ ಬೆಳೆಯುತಿದ್ದ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಇರುವುದು ಸ್ವಲ್ಪ ಕಷ್ಟವಾಗದೆ ಇರಲಾರದು. ಶಾಲಾ ವಾತಾವರಣಕ್ಕೆ ಕೆಲ ಮಕ್ಕಳು ಬೇಗನೆ ಹೊಂದಿಕೊಂಡರೆ, ಇನ್ನು ಕೆಲ ಮಕ್ಕಳಿಗೆ ಸ್ವಲ್ಪ ಕಷ್ಟವಾಗರಬಹುದು. ಪ್ರಾಂಶುಪಾಲರು, ಶಿಕ್ಷಕರು, ನಿಲಯಪಾಲಕರು, ತೋರಿಸುವ ಪ್ರೀತಿ ಕಾಳಜಿಗೆ ಬರುಬರುತ್ತಾ ಅವರು ಹೊಂದಿಕೊಂಡು ಬಿಡುತ್ತಾರೆ.. 



          ಹುಡುಗಾಟದ ಬುದ್ಧಿ, ತುಂಟಾಟ ಕುಚೇಷ್ಟೆ ಮಾಡೋ ವಯಸ್ಸು. ಇದರ ಮಧ್ಯೆ ಇವರನ್ನ ಸಂಭಾಳಿಸುವುದೇ ಶಿಕ್ಷಕರಾದ ನಮಗೆ ಒಂದು ದೊಡ್ಡ ಸರ್ಕಸ್. ಕ್ಲಾಸಿಗೆ ಕಾಲಿಟ್ಟರೆ ಸಾಕು, ಸರ್ ಆಕೀ ಹೊಡಿತಾಳ್ರಿ,  ಬೈತಾಳ್ರಿ, ಚಿವುಟ್ಯಾಳ್ರೀ, ಚುರ್ಯಾಳ್ರಿ, ಅಕೀ ಓದಿಲ್ರಿ, ಬರದಿಲ್ರಿ.  ಎಪ್ಪಾ ...! ಒಂದಾ, ಎರಡಾ,  ಇವರ ಪ್ರಲಾಪಗಳು.  ಎಲ್ಲವೂ ಸಂಬಳಿಸಿ  ಇನ್ನೇನು ಪಾಠ ಮಾಡಬೇಕು ಅನ್ನುವಷ್ಟರಲ್ಲಿ ಒಂದಿಬ್ಬರು ಬಂದೇ ಬಿಡೋರು ಸರ್ ಹೋಮ್ ವರ್ಕ್ ಚೆಕ್ ಮಾಡ್ರೀ, ಶುದ್ಧಬರ ಚೆಕ್ ಮಾಡ್ರೀ ಅಂತ. ನಾಳೆ ಮಾಡೋಣ ಅಂದ್ರು ಕೇಳ್ತಾ ಇರ್ಲಿಲ್ಲ, ಇವತ್ತೆ ಆಗಬೇಕು. ಆಗ್ಲೀ ಅಂತ ಚೆಕ್ ಮಾಡಾಕ ಕುಳಿತ್ರ, ಸರ್ ನಂದ್ ಮೊದಲ್ರಿ, ನಿಂದ್ ಮೊದಲ್ರಿ ಅಂತ ಜಗಳ ಮಾಡ್ಕೋತ ಮೈಮ್ಯಾಲೆ ಬಿಳೋರು.



ಉಸ್ಸಪ್ಪ..! ಎಂದು  ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕಾಗಿ ಹೊಗತಿತ್ತು. ಆಗಿನ ಮಟ್ಟಕ್ಕ ಅವರ ತುಂಟಾಟ ಸ್ವಲ್ಪ ಸಿಟ್ಟು  ತರಿಸಿದರು, ಅವರ ಮುಗ್ಧ ಮಾತುಗಳು ಕ್ಷಣ ಹೊತ್ತಲ್ಲೆ ಮರಿಸಿ ಬಿಡುತ್ತಿದ್ದವು. ಇದೆಲ್ಲವೂ ನೆನೆಸಿಕೊಂಡು ಮನೆಗೆ ಬಂದು ಒಬ್ಬೊಬ್ಬನೇ ಮನಸಲ್ಲಿ ನಗ್ತಿದ್ದೆ. ಇದೆಲ್ಲಾ ನೋಡಿದ ನನಗೆ ದಿನ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಮಾಡುವ ಪ್ರಾಥಮಿಕ ಶಾಲಾ  ಮಾಸ್ತಾರಗಳು ಬಹಳಷ್ಟು ಗ್ರೇಟ್ ಎನಿಸಿದರು. 

ಶಾಲಾ ಕ್ಯಾಂಪಸ್ ನಲ್ಲಿಯೆ ವಸತಿ ಗೃಹಗಳು ಇರುವುದರಿಂದ ಕುಟುಂಬ ಸಮೇತ ನಾವು ಅಲ್ಲಿ ವಾಸ ಮಾಡುತ್ತೇವೆ. ಎಂ.ಓ.ಡಿ ಡ್ಯೂಟಿ ಮೇಲೋ, ಅಥವಾ ಯಾವದೋ ಕಾರಣಕ್ಕೋ ಹೊರಗಡೆ ಬಂದರೆ ಸಾಕು, ಎಲ್ಲರೂ ಸಾಮೂಹಿಕವಾಗಿ ಎದ್ದುನಿತ್ತು ಪ್ರಣಾಮ್ ಗುರೂಜಿ, ಎಂದು ಜೋರು ಧ್ವನಿಯಲ್ಲಿ ದಿನಕ್ಕೆ ಹತ್ತಾರು ಬಾರಿ ವಂದಿಸುತ್ತಾ ಎದ್ದು ನಿಂತೆ ಬಿಡುವರು. ತುಸು ಕಲ್ಮಶವಿರದ ಮುಗ್ಧ ಮನಸ್ಸುಗಳ ಬಾಯಲ್ಲಿ ಇದನ್ನು ಕೇಳುವುದು ಒಂಥರಾ ಖುಷಿನೆ ಅನಿಸುತಿತ್ತು ನನಗೆ. 

        ಬೇಕು ಅಂತಲೇ ನಾನು ಬರುವಾಗ, ಹೋಗುವಾಗ ಹಿಂದಿ ಪುಸ್ತಕ ಕೈಯಾಗ ಹಿಡಕೊಂಡು ಗಂಭೀರವಾಗಿ ಓದುತ್ತಾ ಕುಳಿತು ಬಿಡುತ್ತಿದ್ದರು. ಅವರ ಉದ್ದೇಶವೇ ನಾನು ಅವರ ಕಡೆ ತಿರುಗಿ ಮಾತಾಡಿಸಬೇಕು ಅನ್ನೋದು.  ಆ ಸಮಯದಲ್ಲಿ ನಾವು ಅವರಿಗೆ ಮಾತಾಡಿಸುವರೆ  ಏನೋ ಒಂಥರಾ ಖುಷಿಸಿಗುತಿತ್ತು. 

        ಬರಬರುತ್ತಾ ಎಂಟು, ಒಂಬತ್ತನೆಯ ತರಗತಿಗೆ ಬಂದಾಗ ಆ ಮೊದಲಿನ ತುಂಟಾಟ, ಚೇಷ್ಟೆಗಳು ಮಾಯವಾಗಿ.  ಸೂಕ್ಷ್ಮ ಸಂವೇದನೆಗಳು ಅವರಲ್ಲಿ ಮೂಡಿದವು. ಮಾತಿನಲ್ಲಿ ನಯ, ವಿನಯ, ಸಂಕೋಚಗಳಂತಹ ಭಾವನೆಗಳು ಕಾಣತೊಡಗಿದವು. ಹುಡುಗಾಟದ ಬುದ್ಧಿ ಹೋಗಿ. ಜವಾಬ್ದಾರಿ ಬಂತು. 

        10ನೇ ತರಗತಿಗೆ ಬಂದಾಗ ಎಲ್ಲರಿಗೂ ಇವರ ಮೇಲೆ ವಿಶೇಷ ಕಾಳಜಿಯಿತ್ತು. ಎಲ್ಲರೂ ಚೆನ್ನಾಗಿ ಓದಬೇಕು ಒಳ್ಳೆಯ ಅಂಕಗಳನ್ನು ತೆಗಿಬೇಕು. ಶಾಲಿಗೆ ಕೀರ್ತಿಯ ಜೊತೆಗೆ. ನಮ್ಮ ವಿಷಯದಲ್ಲೂ ಹೆಚ್ಚಿನ ಅಂಕಗಳನ್ನು ತೆಗಿಯಬೇಕೆನ್ನುವ  ಸ್ವಾರ್ಥವೂ ಇದರಲ್ಲಿ ಅಡಗಿತ್ತು. ಹೀಗಾಗಿ ಎಲ್ಲಾ ಶಿಕ್ಷಕರು  ವಿಶೇಷ ತರಗತಿಗಳು ಘಟಕ ಪರೀಕ್ಷೆಗಳು, ಸ್ಕೂರಿಂಗ್ ಪ್ಯಾಕೆಜ್, ಲರ್ನಿಂಗ್ ಪ್ಯಾಕೆಜ್ ಕೊಟ್ಟು ವೈಯಕ್ತಿಕ ಕಾಳಜಿ ವಹಿಸುತ್ತಾ ಓದಿಸುತಿದ್ದೇವು. ಓದಿನ ಒತ್ತಡವೂ ಹಾಕಿದೇವು. ಹೇಳಿದ ಕೆಲಸ ಮಾಡಿದ್ದಾಗ ಬೈದಿದ್ದೇವೆ ಗದರಿಸಿದ್ದೇವೆ ಅದೇನೇ ಮಾಡಿದ್ದರು ನಿಮ್ಮ ಉತ್ತಮ ಭವಿಷ್ಯದಕ್ಕಾಗಿ. ನಾಳೆ ನೀವು ಉತ್ತಮ ಅಂಕಗಳು ಪಡೆದುಕೊಂಡರೆ ನಿಮಗಿಂತಲೂ ಹೆಚ್ಚಿನ ಖುಷಿ ನಮ್ಮಲ್ಲಿರುತ್ತದೆ.

         ಈಗಾಗಲೇ   ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ. ಇನ್ನೊಂದು ವಾರದಲ್ಲಿ ಪರೀಕ್ಷೆಗಳು ಮುಗಿಯಬಹುದು. ತುಂಟ ಮರ್ಕಟ ಮನಸ್ಸುಗಳ ಕಣ್ಣಂಚು ನೀರಾಗಬಹುದು. ಮಧುರ ನೆನಪುಗಳಿಂದ ತೊಯ್ದು ತೊಟ್ಟಿಕ್ಕಲುಬಹುದು. ನಿಮ್ಮ ವಿದಾಯ ಪ್ರತಿಯೊಬ್ಬ ಶಿಕ್ಷಕ ಶಿಕ್ಷಕಿಯರಿಗೂ ಮನೆಯಿಂದ ಮಗಳು ಹೊದಂತ, ಅಕ್ಕ ತಂಗಿಯರನ್ನು ಕಳುಹಿಸಿಕೊಡುವಂತ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗುವದಂತು ಸತ್ಯ. ಅತ್ತು, ಅಳಿಸಿ ಮನಸ್ಸು  ಭಾರಮಾಡಿ ಹೊರಟು ಹೋಗುವ ಆ ಕ್ಷಣ ನೆನೆಸಿಕೊಂಡರೆ ಮೈ ಝುಂ ಎನುತದೆ. 

          ನನ್ನ ಸೇವಾವಧಿಯಲ್ಲಿ ಸುಮಾರು ಹತ್ತಾರು ಎಸ್ ಎಸ್ ಎಲ್ ಸಿ ಬ್ಯಾಚುಗಳು ಕಳೆದು ಹೋಗಿವೆ. ಕೆಲವರು ಮತ್ತೆ ಹೋಗಿರುತ್ತಾರೆ ಇನ್ನೂ ಕೆಲವರು ನೆನಪಿಟ್ಟು ಶಿಕ್ಷಕರ ದಿನಾಚರಣೆಗೆ ಕಾಲ್ ಮಾಡಿ ಶುಭಾಶಯಗಳು ತಿಳಿಸುತ್ತಾರೆ. ರಕ್ತ ಸಂಬಂಧಕ್ಕಿಂತಲು ಮಿಗಿಲಾದುದ್ದು ಈ ಗುರು ಶಿಷ್ಯರ ಭಾಂದವ್ಯ. ಪ್ರತಿ ವರ್ಷವೂ ಈ ದಿನ ಬಂದರೆ ಸಾಕು ಕಲಿಸಿದ ಗುರುವಿನ ಮನಸ್ಸುಲ್ಲಿ ಏನೋ ಒಂಥರಾ ತಳಮಳ ಕಸಿವಿಸಿ.  ತುಂಟಾಟ, ಚೆಲ್ಲಾಟ, ನೋವು-ನಲಿವುಗಳ ಸಮ್ಮಿಲನ ಸುಮಾರು ಐದು ವರ್ಷಗಳ ಬಾಂಧವ್ಯದ ಕೊಂಡಿ ಅವರ್ಣೀಯ ಅವಿಸ್ಮರಣೀಯ. 

ಪ್ರತಿ ವರ್ಷವು ಇದೇ ರೀತಿ ಅನುಭವ. ಮೌಲ್ಯಮಾಪನ ಕಾರ್ಯ, ಚುನಾವಣೆ ಕಾರ್ಯ, ಮತ್ತು ಬೇಸಿಗೆ ರಜೆಗಳ ಮದ್ಯ ಇವೆಲ್ಲವನ್ನೂ ಮರೆತು ಬಿಡುತ್ತೇವೆ. "ಹಳೆ ನೀರು ಹೋಗಿ, ಹೊಸ ನೀರು ಬರುವಂತೆ"  ಮತ್ತೆ ಶಾಲೆಗಳು ಪ್ರಾರಂಭವಾಗುತ್ತವೆ. ಈ ಶಾಲಾ ನಂದನವನಕ್ಕೆ ಆರರ ಸಸಿಗಳಾಗಿ ಹೊಸ ಮಕ್ಕಳು ಬರುತ್ತಾರೆ. ಮುಗ್ಗುಗಳಾಗಿ ಬೀರಿಯುತ್ತಾರೆ. ನಮ್ಮ ಶಾಲಾ ಅಂಗಣದಲ್ಲಿ ಸೊಗಸಾಗಿ ಅರಳುತ್ತಾರೆ, ಎಲ್ಲೆಡೆ ಸುವಾಸನೆಯ ಕಂಪು ಸೂಸಲು ಹೊರಡುತ್ತಾರೆ. ಭವ್ಯ ಭವಿಷ್ಯದ ಮುನ್ನುಡಿ ಬರೆದು ನಾಳೆಯ ನಾಡಿನ ಒಳ್ಳೆಯ ಪ್ರಜೆಗಳಾಗಲು ಹೊರಟ ನನ್ನ ಮುದ್ದು ಮಕ್ಕಳಿಗೆ ಶುಭ ಹಾರೈಕೆಗಳು.  

ಹೋಗಿ ಬನ್ನಿ ಮಕ್ಕಳೇ... ನಿಮ್ಮ ಭಾವಿ ಭವಿಷ್ಯ ಉಜ್ವಲವಾಗಲಿ... ನೀವು ಕಲಿತ ಈ ಶಾಲೆಯನ್ನು ಮರೆದಿರಿ.. 

ಬಸವರಾಜ ಭೂತಿ, ಹಿಂದಿ ಭಾಷಾ ಶಿಕ್ಷಕರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಶಹಪುರ್

No comments:

Post a Comment

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...